ADVERTISEMENT

ಬೆಂಗಳೂರು | ಜೋರು ಮಳೆ: ಕೊಂಚ ತಗ್ಗಿದ ಉಷ್ಣಾಂಶ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2023, 22:11 IST
Last Updated 17 ಮಾರ್ಚ್ 2023, 22:11 IST
ನಗರದಲ್ಲಿ ಶುಕ್ರವಾರ ಸುರಿದ ಮಳೆಯಲ್ಲಿ ಚರ್ಚ್ ಸ್ಟ್ರೀಟ್‌ನಲ್ಲಿ ಯುವಜೋಡಿಯೊಂದು ಸಂಭ್ರಮಿಸಿತು – ಪ್ರಜಾವಾಣಿ ಚಿತ್ರ/ರಂಜು ಪಿ.
ನಗರದಲ್ಲಿ ಶುಕ್ರವಾರ ಸುರಿದ ಮಳೆಯಲ್ಲಿ ಚರ್ಚ್ ಸ್ಟ್ರೀಟ್‌ನಲ್ಲಿ ಯುವಜೋಡಿಯೊಂದು ಸಂಭ್ರಮಿಸಿತು – ಪ್ರಜಾವಾಣಿ ಚಿತ್ರ/ರಂಜು ಪಿ.   

ಬೆಂಗಳೂರು: ನಗರದಲ್ಲಿ ಶುಕ್ರವಾರ ರಾತ್ರಿಯೂ ವರುಣ ಆರ್ಭಟಿಸಿತು. ಇದರಿಂದ ವಾತಾವರಣ ಮತ್ತಷ್ಟು ತಂಪಾಯಿತು. ಕಳೆದು ಒಂದು ತಿಂಗಳಿಂದ ರಾಜಧಾನಿಯಲ್ಲಿ ಉಷ್ಣಾಂಶ ದಿಢೀರ್‌ ಏರಿಕೆಯಾಗಿ ನಗರದ ಜನರು ಹೈರಾಣಾಗಿದ್ದರು. ಮಳೆಯು ಜನರಿಗೆ ಕೊಂಚ ನೆಮ್ಮದಿ ತರಿಸಿತು.

ಶುಕ್ರವಾರ ಹಗಲು ವೇಳೆಯಲ್ಲಿ ಮೋಡ ಕವಿದ ವಾತಾವರಣ ಇತ್ತು. ನಗರದ ಹಲವು ಪ್ರದೇಶದಲ್ಲಿ ರಾತ್ರಿ 8 ಗಂಟೆಯ ವೇಳೆಗೆ ಮತ್ತೆ ಮಳೆ ಆರಂಭವಾಯಿತು. ಕೆಲವು ಬಡಾವಣೆಗಳಲ್ಲಿ ರಭಸವಾಗಿ ಮಳೆ ಸುರಿಯಿತು. ದ್ವಿಚಕ್ರ ವಾಹನಗಳಲ್ಲಿ ಮನೆಗೆ ತೆರಳುತ್ತಿದ್ದವರು ಮಳೆಯಲ್ಲೇ ತೊಯ್ದುಕೊಂಡೇ ಸಾಗಿದರು.

ಕೆಂಗೇರಿ ಭಾಗದಲ್ಲಿ ಶುಕ್ರವಾರ ರಾತ್ರಿ 8.30ಕ್ಕೆ ಆರಂಭವಾದ ಮಳೆ ಅರ್ಧ ತಾಸಿಗೂ ಹೆಚ್ಚು ಕಾಲ ರಭಸದಿಂದ ಸುರಿಯಿತು.

ADVERTISEMENT

ಕೆಂಗೇರಿ, ಬನಶಂಕರಿ 6ನೇ ಹಂತ, ಚನ್ನಸಂದ್ರ, ರಾಜೇಶ್ವರಿ ನಗರ, ಗಾಣಕಲ್ಲು, ಕರಿಯನಪಾಳ್ಯ, ಹೆಮ್ಮಿಗೆಪುರ, ಬಾಬಾ ಸಾಹೇಬರ ಪಾಳ್ಯ ಸೇರಿದಂತೆ ಮೈಸೂರು ರಸ್ತೆಯಲ್ಲಿ ಮಳೆಯ ಆರ್ಭಟ ಜೋರಾಗಿತ್ತು. ಗುರುವಾರವೂ ಈ ವ್ಯಾಪ್ತಿಯಲ್ಲಿ ತಡರಾತ್ರಿ ಜಿಟಿ ಜಿಟಿ ಮಳೆಯಾಗಿತ್ತು. ಆದರೆ, ವಾಹನ ಸವಾರರಿಗೆ ಯಾವುದೇ ಅಡ್ಡಿಯಾಗಿರಲಿಲ್ಲ. ಆದರೆ, ಶುಕ್ರವಾರ ಸುರಿದ ಮಳೆಗೆ ರಸ್ತೆಗಳಲ್ಲಿ ನೀರು ಹರಿದು ವಾಹನ ಸವಾರರಿಗೆ ಅಡಚಣೆ ಉಂಟಾಯಿತು. ಹೊರ ವಲಯದ ಅಗರ, ತಾತಗುಣಿ ಸುತ್ತಮುತ್ತಲೂ ತುಂತುರು ಮಳೆಯಾಗಿದೆ.

ಟಿ.ದಾಸರಹಳ್ಳಿ, ಪೀಣ್ಯ, ಜಾಲಹಳ್ಳಿ, ಸುಂಕದಕಟ್ಟೆ, ಯಶವಂತಪುರ, ನಾಗಸಂದ್ರ, ನೆಲಮಂಗಲ ವ್ಯಾಪ್ತಿ, ಮರಿಯಪ್ಪನಪಾಳ್ಯ, ಬಿ.ಇ.ಎಲ್, ಮತ್ತೀಕೆರೆ ಹಾಗೂ ದೇವನಹಳ್ಳಿ ಭಾಗದಲ್ಲಿ ಜೋರು ಗುರುವಾರ ರಾತ್ರಿಯಿಡೀ ರಭಸವಾಗಿ ಮಳೆ ಸುರಿದಿತ್ತು. ದೀಪಾಂಜಲಿ ನಗರ, ಜ್ಞಾನಭಾರತಿ, ವಿಧಾನಸೌಧದ ಸುತ್ತಮುತ್ತ, ಮೆಜಿಸ್ಟಿಕ್‌, ರಾಜಾಜಿನಗರ, ಮಹಾಲಕ್ಷ್ಮಿಲೇಔಟ್‌, ಬನಶಂಕರಿ ಸೇರಿದಂತೆ ನಗರದ ಹಲವು ಕಡೆ ಮಳೆಯಾಗಿದೆ. ಗುಂಡಿಗಳಲ್ಲಿ ಅಪಾರ ಪ್ರಮಾಣದ ನೀರು ಸಂಗ್ರಹಗೊಂಡಿತು.

ಎರಡು ದಿನ ಮಳೆ ಸಾಧ್ಯತೆ: ರಾಜಧಾನಿಯಲ್ಲಿ ಇನ್ನೂ ಎರಡು ದಿನ ಸಂಜೆ ಅಥವಾ ರಾತ್ರಿ ಸಮಯದಲ್ಲಿ ಜೋರು ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.