ಬೆಂಗಳೂರು: ಹೆಬ್ಬಾಳ ಜಂಕ್ಷನ್ ಬಳಿ ಸಂಚಾರಕ್ಕೆ ಮುಕ್ತವಾಗಿರುವ ಲೂಪ್‌ನಿಂದಾಗಿ (ಪಥ) ಕೊಂಚ ಮಟ್ಟಿಗೆ ಸಂಚಾರ ದಟ್ಟಣೆ ತಗ್ಗಿದೆ. ದಟ್ಟಣೆ ಅವಧಿಯಾದ ಬೆಳಿಗ್ಗೆ ಮತ್ತು ಸಂಜೆ ವಾಹನಗಳು ನಿಧಾನಗತಿಯಲ್ಲಿ ಸಾಗುತ್ತಿವೆ.
ನಾಗವಾರ– ಕೆ.ಆರ್.ಪುರ ಕಡೆಯಿಂದ ಮೇಖ್ರಿ ವೃತ್ತದ ಕಡೆ ಸಾಗುವ ವಾಹನಗಳ ಸುಗಮ ಸಂಚಾರಕ್ಕೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ನಿರ್ಮಿಸಿರುವ ಲೂಪ್ ಅನ್ನು ಸೋಮವಾರ ಸಾರ್ವಜನಿಕ ಬಳಕೆಗೆ ಮುಕ್ತಗೊಳಿಸಲಾಯಿತು. ದಟ್ಟಣೆ ಅವಧಿಯಲ್ಲಿಯೇ ಉದ್ಘಾಟನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಹಾಗಾಗಿ ಸಮಾರಂಭ ಮುಗಿಯುತ್ತಿದ್ದಂತೆಯೇ ವಾಹನಗಳು ಸಾಲುಗಟ್ಟಿ ನಿಂತ ಕಾರಣ ಸವಾರರು ಪರದಾಡಿದ್ದರು.
ಎರಡನೇ ದಿನವಾದ ಮಂಗಳವಾರ ಬೆಳಿಗ್ಗೆ ಸ್ಥಳಕ್ಕೆ ಭೇಟಿ ನೀಡಿದ ವೇಳೆ ಹೊಸ ಪಥದಲ್ಲಿ ವಿಪರೀತ ವಾಹನ ದಟ್ಟಣೆಯ ಕಾರಣ ನಿಧಾನಗತಿಯಲ್ಲಿ ಸಂಚರಿಸುತ್ತಿರುವುದು ಕಂಡುಬಂತು. ಹೆಬ್ಬಾಳ ಮೇಲ್ಸೇತುವೆ, ಬಳ್ಳಾರಿ ರಸ್ತೆ, ಮೇಖ್ರಿ ವೃತ್ತ ಹಾಗೂ ಪಕ್ಕದ ರಸ್ತೆಗಳಲ್ಲಿ ಅಷ್ಟೇನೂ ವಾಹನ ದಟ್ಟಣೆ ಕಂಡು ಬರಲಿಲ್ಲ.
ವಾಹನಗಳು ಸುಗಮವಾಗಿ ಬಂದರೂ ಮೇಲ್ಸೇತುವೆ ಇಳಿಯುತ್ತಿದ್ದಂತೆಯೇ ಸರ್ವೀಸ್ ರಸ್ತೆಯಿಂದಲೂ ವಾಹನಗಳು ಬಂದು ಸೇರಿಕೊಳ್ಳುತ್ತವೆ. ಇದರಿಂದ ಸಂಚಾರ ದಟ್ಟಣೆ ಉಂಟಾಗುತ್ತಿದೆ. ಮೇಲ್ಸೇತುವೆ ಮತ್ತು ಸರ್ವೀಸ್ ರಸ್ತೆಯಿಂದ ವಾಹನಗಳು ಸಾಗಿ ಮುಂದೆ ಬರುವ ಹೊತ್ತಿಗೆ ಯಲಹಂಕ, ದೇವನಹಳ್ಳಿ, ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ ಭಾಗಗಳಿಂದ ಬರುವ ನೂರಾರು ಬಸ್‌ಗಳು ಸೇರುತ್ತವೆ. ಈ ವಾಹನಗಳು ಬ್ಯಾಪ್ಟಿಸ್ಟ್ ಆಸ್ಪತ್ರೆ ಎದುರಿನ ಬಸ್ ನಿಲುಗಡೆ ತಾಣದಲ್ಲಿ ನಿಲ್ಲುತ್ತವೆ. ಮುಖ್ಯ ರಸ್ತೆಯಲ್ಲೇ ಪ್ರಯಾಣಿಕರ ದಂಡು ಕಂಡುಬಂತು.
ಹೆಬ್ಬಾಳದ ಸುತ್ತಮುತ್ತಲಿನ ನಿವಾಸಿಗಳು ಅಡ್ಡರಸ್ತೆಗಳ ಮೂಲಕ ಬಂದವರು ಸರ್ವೀಸ್ ರಸ್ತೆಯಲ್ಲೇ ಬರಬೇಕು. ಇಲ್ಲವಾದರೇ ವಿ. ನಾಗೇನಹಳ್ಳಿ ರಸ್ತೆ ಮಾರ್ಗವಾಗಿ ಬಳಸಿಕೊಂಡು ಬರಬೇಕಾಗುತ್ತದೆ. ಹೀಗಾಗಿ, ಬಹತೇಕ ಸವಾರರು ಸರ್ವೀಸ್ ರಸ್ತೆಯಲ್ಲೇ ಸಾಗುತ್ತಿದ್ದಾರೆ.
ಸಂಚಾರ ಪೊಲೀಸರ ಪ್ರಕಾರ, ಹೆಬ್ಬಾಳ ಜಂಕ್ಷನ್‌ನಲ್ಲಿ ನಿತ್ಯ ಅಂದಾಜು ನಾಲ್ಕು ಲಕ್ಷ ವಾಹನಗಳು ಸಂಚರಿಸುತ್ತವೆ. ಅದರಲ್ಲೂ ಬೆಳಿಗ್ಗೆ ಮತ್ತು ಸಂಜೆ ಅವಧಿಯಲ್ಲಿ ಪ್ರತಿ ಗಂಟೆಗೆ ಸರಾಸರಿ ಐವತ್ತು ಸಾವಿರ ವಾಹನಗಳು ಸಂಚರಿಸುತ್ತವೆ. ಲೂಪ್ ಉದ್ಘಾಟನೆಗೂ ಮುನ್ನ ಜಂಕ್ಷನ್‌ನಲ್ಲಿ ಅರ್ಧ ತಾಸಿಗೂ ಹೆಚ್ಚು ಕಾಯಬೇಕಾಗಿತ್ತು. ಆದರೆ, ಈಗ ಕಾಯುವ ಅವಧಿ 10ರಿಂದ 15 ನಿಮಿಷಕ್ಕೆ ಇಳಿದಿದೆ.
‘ಮೇಖ್ರಿ ವೃತ್ತದ ಕಡೆ ಹೋಗುವ ಪ್ರಯಾಣಿಕರಿಗೆ ಹೆಬ್ಬಾಳದ ಪಾಲಿಕೆ ಕಚೇರಿ ಬಳಿ ಬಸ್ ನಿಲ್ದಾಣವಿತ್ತು. ಲೂಪ್ ನಿರ್ಮಾಣದ ಕಾರಣ ಅದನ್ನು ಬ್ಯಾಪ್ಟಿಸ್ಟ್ ಆಸ್ಪತ್ರೆ ಮುಂಭಾಗಕ್ಕೆ ಸ್ಥಳಾಂತರಿಸಲಾಯಿತು. ಈಗ ಬ್ಯಾಪ್ಟಿಸ್ಟ್ ಬಳಿಯೇ ಬಸ್ ನಿಲ್ದಾಣ ಮುಂದುವರಿದರೆ ನಡು ರಸ್ತೆಯಲ್ಲೇ ಬಸ್‌ಗಳು ನಿಲ್ಲುವುದರಿಂದ ಸಂಚಾರ ದಟ್ಟಣೆ ಇನ್ನೂ ಹೆಚ್ಚುತ್ತದೆ. ಹಾಗಾಗಿ ಈ ಸಮಸ್ಯೆ ಬಗೆಹರಿಸಬೇಕು’ ಎಂದು ಸ್ಥಳೀಯರು ಆಗ್ರಹಿಸಿದರು.
‘ಕೊಡಿಗೇಹಳ್ಳಿ, ಸಹಕಾರ ನಗರ ಒಳಗೊಂಡಂತೆ ವಿಮಾನ ನಿಲ್ದಾಣ ಕಡೆಯಿಂದ ನಗರದ ಕಡೆಗೆ ಸಂಚಾರಕ್ಕೆ ಅನುಕೂಲವಾಗುವಂತೆ ಮೇಲ್ಸೇತುವೆಯಲ್ಲಿ ಎರಡು ಪಥಗಳನ್ನು ನಿರ್ಮಿಸಲಾಗುತ್ತಿದೆ. ತುಮಕೂರು ಕಡೆಯಿಂದ ಕೆ.ಆರ್.ಪುರ ಕಡೆಗೆ ಸಂಚರಿಸಲು ಕೆಳಸೇತುವೆ ಮತ್ತು ಕೆ.ಆರ್.ಪುರ ಕಡೆಯಿಂದ ವಿಮಾನ ನಿಲ್ದಾಣ ಕಡೆಗೆ ಮೇಲ್ಸೇತುವೆ ಕಾಮಗಾರಿ ಆಗಬೇಕಿದೆ. ಈ ಎಲ್ಲಾ ಕಾಮಗಾರಿಗಳು ಪೂರ್ಣಗೊಂಡರೆ ವಿಮಾನ ನಿಲ್ದಾಣದಿಂದ ತುಮಕೂರು ಕಡೆಗಿನ ಸಂಚಾರ ಬಹುತೇಕ ಸಿಗ್ನಲ್ ಮುಕ್ತವಾಗಲಿದೆ. ಇದರಿಂದ ಸಂಚಾರ ಸಮಸ್ಯೆಗೂ ಪರಿಹಾರ ಸಿಗಲಿದೆ’ ಎಂದು ಬಿಡಿಎ ಅಧಿಕಾರಿಗಳು ತಿಳಿಸಿದರು.
ಸಂಚಾರ ದಟ್ಟಣೆ ಶೇಕಡ 25ರಷ್ಟು ಕಡಿಮೆ
‘ಲೂಪ್ ಉದ್ಘಾಟನೆಗೂ ಮುನ್ನ ಸಂಚಾರ ದಟ್ಟಣೆ ಹೆಚ್ಚಾಗಿತ್ತು. ಈಗ ಹೆಬ್ಬಾಳ ಜಂಕ್ಷನ್‌ನಲ್ಲಿ ಸಂಚಾರ ದಟ್ಟಣೆ ಶೇಕಡ 25ರಷ್ಟು ತಗ್ಗಿದೆ. ಬೆಳಿಗ್ಗೆ ಮತ್ತು ಸಂಜೆ ವಾಹನ ದಟ್ಟಣೆ ಅಧಿಕ. ಆಗ ಮಾತ್ರ ವಾಹನಗಳ ಸಂಚಾರ ನಿಧಾನವಾಗಿರುತ್ತದೆ. ಇದನ್ನು ಹೊರತುಪಡಿಸಿದರೆ ಉಳಿದ ಅವಧಿಯಲ್ಲಿ ಸುಗಮ ಸಂಚಾರವಿದೆ. ಈಗ ಹೊಸ ಪಥ ಆರಂಭಗೊಂಡಿದೆ. ಇನ್ನೊಂದು ಭಾಗದ ಪಥ ಪೂರ್ಣಗೊಂಡರೆ ಸಂಚಾರ ದಟ್ಟಣೆ ಮತ್ತಷ್ಟು ಕಡಿಮೆ ಆಗಲಿದೆ’ ಎಂದು ಸಂಚಾರ ವಿಭಾಗದ ಪೊಲೀಸ್ ಅಧಿಕಾರಿಗಳು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.