ADVERTISEMENT

ಹೆಣ್ಣೂರು: ಬಿಗಡಾಯಿಸಿದ ರಸ್ತೆ ಸಮಸ್ಯೆ

ಅಧಿಕಾರಿಗಳಿಂದ ಸಿಗದ ಸ್ಪಂದನೆ: ನಿವಾಸಿಗಳ ದೂರು

​ಪ್ರಜಾವಾಣಿ ವಾರ್ತೆ
Published 4 ಜುಲೈ 2018, 19:17 IST
Last Updated 4 ಜುಲೈ 2018, 19:17 IST
ನಗರದ ಹೆಣ್ಣೂರು ಬಂಡೆ ಮೇಲುಸೇತುವೆ ಸರ್ವಿಸ್ ರಸ್ತೆ ಬದಿ ಕಟ್ಟಡದ ಅವಶೇಷಗಳನ್ನು ಹಾಕಲಾಗಿದ್ದು ವಾಹನ ಸಂಚಾರಕ್ಕೆ ತೊಂದರೆಯಾಗಿದೆ. ಫುಟ್‌ಪಾತ್‌ ಇಲ್ಲದ ಕಾರಣ ಚರಂಡಿ ಡಕ್‌ ಮೇಲೆ ಜನರು ನಡೆಯಬೇಕಿದೆ-ಪ್ರಜಾವಾಣಿ ಚಿತ್ರ /ಸತೀಶ್ ಬಡಿಗೇರ್
ನಗರದ ಹೆಣ್ಣೂರು ಬಂಡೆ ಮೇಲುಸೇತುವೆ ಸರ್ವಿಸ್ ರಸ್ತೆ ಬದಿ ಕಟ್ಟಡದ ಅವಶೇಷಗಳನ್ನು ಹಾಕಲಾಗಿದ್ದು ವಾಹನ ಸಂಚಾರಕ್ಕೆ ತೊಂದರೆಯಾಗಿದೆ. ಫುಟ್‌ಪಾತ್‌ ಇಲ್ಲದ ಕಾರಣ ಚರಂಡಿ ಡಕ್‌ ಮೇಲೆ ಜನರು ನಡೆಯಬೇಕಿದೆ-ಪ್ರಜಾವಾಣಿ ಚಿತ್ರ /ಸತೀಶ್ ಬಡಿಗೇರ್   

ಬೆಂಗಳೂರು: ಹೆಣ್ಣೂರು ಮೇಲು ಸೇತುವೆಯ ಕೆಳಗೆ ನೀರಿನ ಪೈಪ್‌ ಅಳವಡಿಕೆಗೆ ತೆಗೆದ ಗುಂಡಿ ಮುಚ್ಚಿದ ಬಳಿಕ ಡಾಂಬರು ಹಾಕದೆ ಹಾಗೇ ಬಿಡಲಾಗಿದೆ. ಮೇಲು ಸೇತುವೆ ಬಳಿಯಿಂದ ಕೊತ್ತನೂರು ಮುಖ್ಯ ರಸ್ತೆಯವರೆಗೆ ರಸ್ತೆ ಅಗೆದು ಹಾಕಲಾಗಿದೆ.

ಇದರಿಂದ ಹೆಣ್ಣೂರು ಫ್ಲೈಓವರ್‌ ಆಸುಪಾಸಿನ ಸುಮಾರು 4 ಕಿ.ಮೀ. ವರೆಗೆ ಸಂಚಾರಕ್ಕೆ ತೊಂದರೆ ಆಗಿದೆ. ಗುಂಡಿಯಲ್ಲಿ ವಾಹನಗಳು ಸಿಲುಕುವುದು, ದಟ್ಟಣೆ ಉಂಟಾಗುವುದು, ವ್ಯಾಪಕವಾಗಿ ದೂಳು ಹರಡುವುದು ಸಾಮಾನ್ಯವಾಗಿಬಿಟ್ಟಿದೆ ಎಂದು ಹೆಣ್ಣೂರು ನಿವಾಸಿಗಳ ಕಲ್ಯಾಣ ಸಂಘದ ಸದಸ್ಯರು ದೂರಿದ್ದಾರೆ.

ಇದೇ ವಿಷಯಕ್ಕೆ ಸಂಬಂಧಿಸಿ ಮಂಗಳವಾರ ಸ್ಥಳೀಯರು ಪ್ರತಿಭಟನೆಯನ್ನೂ ನಡೆಸಿದ್ದಾರೆ. ಜಲಮಂಡಳಿ ಅಗೆದ ರಸ್ತೆಯನ್ನು ಮೊದಲಿನ ಸ್ಥಿತಿಗೆ ತರಬೇಕು. ಸಂಚಾರ ಸುಗಮಗೊಳಿಸಲು ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿದ್ದಾರೆ.

ADVERTISEMENT

ಇಲ್ಲಿ ಪಾದಚಾರಿ ಮಾರ್ಗವೂ ಇಲ್ಲ. ರಸ್ತೆ ಬದಿಯಲ್ಲಿಯೇ ಹಲವು ನಿರ್ಮಾಣ ಸಂಸ್ಥೆಗಳು ಕಟ್ಟಡ ತ್ಯಾಜ್ಯವನ್ನು ತಂದು ಸುರಿಯುತ್ತಿವೆ. ಈ ಅಡೆತಡೆಯಿಂದಾಗಿ ಎರಡು ವಾಹನ ಸಂಚರಿಸುವಲ್ಲಿ ಒಂದೇ ವಾಹನ ಸಂಚರಿಸಬೇಕಾಗಿದೆ. ಇವು ವಾಹನ ಸಂಚಾರಕ್ಕೆ ತಡೆಗೋಡೆಯಾಗಿ ಪರಿಣಮಿಸಿದೆ.

ಡಾಂಬರು ರಹಿತ ಭಾಗದಲ್ಲಿ ವಾಹನಗಳ ಓಡಾಟದಿಂದ ಹೊಮ್ಮುವ ದೂಳು ಸುತ್ತಮುತ್ತಲಿನ ಪ್ರದೇಶದಲ್ಲಿ ಆರೋಗ್ಯ ಸಮಸ್ಯೆ ತಂದೊಡ್ಡಿದೆ.
ಜಲಮಂಡಳಿ, ಬಿಬಿಎಂಪಿ ಅಧಿಕಾರಿಗಳು ಇತ್ತ ಗಮನಹರಿಸಿ ಸಮಸ್ಯೆ ಬಗೆಹರಿಸಬೇಕು ಎಂದು ನಿವಾಸಿಗಳು ಒತ್ತಾಯಿಸಿದ್ದಾರೆ.

ಈ ಪ್ರದೇಶದಲ್ಲಿ ರಸ್ತೆಗುಂಡಿಗಳಿಂದಾಗಿಯೇ ಪ್ರತಿದಿನ ಅಪಘಾತಗಳು ಸಂಭವಿಸುತ್ತಿವೆ
-ಮುನಿರಾಜು, ಹೆಣ್ಣೂರು ನಿವಾಸಿಗಳ ಕಲ್ಯಾಣ ಸಂಘದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.