ಬೆಂಗಳೂರು: ವಿಶ್ವ ಹೆಪಟೈಟಿಸ್ ದಿನದ ಪ್ರಯುಕ್ತ ನಾಲೆಡ್ಜಿಯಮ್ ಅಕಾಡೆಮಿ, ಜೈನ್ ಗ್ರೂಪ್ ಮತ್ತು ಆಸ್ಟರ್ ಆರ್.ವಿ ಆಸ್ಪತ್ರೆ ಜಂಟಿಯಾಗಿ ನಗರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ‘ಹೆಪಟೈಟಿಸ್’ (ಯಕೃತ್ತಿನ ಉರಿಯೂತ) ಸಮಸ್ಯೆ ಬಗ್ಗೆ ಜಾಗೃತಿ ಮೂಡಿಸಿ, ತಪಾಸಣೆ ನಡೆಸಲಾಯಿತು.
ಉಚಿತ ಆರೋಗ್ಯ ಶಿಬಿರದಲ್ಲಿ ಅಧಿಕ ರಕ್ತದೊತ್ತಡ, ರ್‍ಯಾಪಿಡ್ ಹೆಪಟೈಟಿಸ್ ಬಿ ಮತ್ತು ಸಿ ತಪಾಸಣೆ ಸೇರಿ ವಿವಿಧ ಪರೀಕ್ಷೆಗಳನ್ನು ಉಚಿತವಾಗಿ ನಡೆಸಿದ ವೈದ್ಯರು, ಆರೋಗ್ಯದ ಬಗ್ಗೆ ಕಾಳಜಿ ವಹಿಸಲು ಸಲಹೆ ನೀಡಿದರು.
‘ಹೆಪಟೈಟಿಸ್ ವೈರಾಣುವನ್ನು ಆರಂಭದಲ್ಲೇ ಪತ್ತೆ ಹಚ್ಚಿದರೆ ಯಕೃತ್ತಿಗೆ ಹಾನಿಯನ್ನು ತಡೆಯಬಹುದು. ಕೆಲಪ್ರಕರಣಗಳಲ್ಲಿ ಸೋಂಕಿತರಿಗೆ ಲಕ್ಷಣಗಳು ಕೊನೆ ಹಂತದವರೆಗೆ ಗೋಚರಿಸುವುದಿಲ್ಲ. ಹೀಗಾಗಿ ನಿಯಮಿತ ತಪಾಸಣೆ ಅಗತ್ಯ’ ಎಂದರು.
ಆರಂಭಿಕ ಹಂತದಲ್ಲೇ ಹೆಪಟೈಟಿಸ್ ಪತ್ತೆ ಮಹತ್ವದ ಬಗ್ಗೆ ಮಾತನಾಡಿದ ಆಸ್ಟರ್ ಆಸ್ಪತ್ರೆಯ ಡಾ.ನವೀನ್ ಗಂಜೂ, ‘ಹೆಪಟೈಟಿಸ್ ಸೋಂಕು ಆಹಾರ ಮತ್ತು ಜೀವನಶೈಲಿ ಬದಲಾವಣೆಗಳಿಂದ ಬರುತ್ತದೆ. ಮಾನವನ ಅಂಗಾಂಗಗಳಲ್ಲಿ ಯಕೃತ್ತಿನ ಆರೈಕೆಗೆ ಆದ್ಯತೆ ನೀಡಬೇಕು. ಹೆಪಟೈಟಿಸ್ ಬಿ ಮತ್ತು ಸಿ ವೈರಾಣು ಯಕೃತ್ತಿಗೆ ಹಾನಿ ಮಾಡುತ್ತವೆ’ ಎಂದು ಹೇಳಿದರು.
‘ಹೆಪಟೈಟಿಸ್ ಎ ಮತ್ತು ಇ ಸೋಂಕು ಮಲ, ಕಲುಷಿತ ಆಹಾರ ಮತ್ತು ನೀರಿನಿಂದ ಹರಡುತ್ತದೆ. ಹೆಪಟೈಟಿಸ್ ಬಿ ಮತ್ತು ಸಿ ಸೋಂಕು ರಕ್ತ, ಲೈಂಗಿಕ ಮಾರ್ಗದ ಮೂಲಕ ಹರಡುತ್ತದೆ. ದೇಶದಲ್ಲಿ ಸುಮಾರು 3.5 ಕೋಟಿ ಜನರು ಹೆಪಟೈಟಿಸ್ ಬಿ ಮತ್ತು ಸಿ ಸಮಸ್ಯೆ ಎದುರಿಸುತ್ತಿದ್ದಾರೆ. ನಿಯಮಿತವಾಗಿ ತಪಾಸಣೆ ಮಾಡಿಸಿಕೊಳ್ಳದಿರುವುದೇ ಪ್ರಕರಣ ಏರಿಕೆಗೆ ಕಾರಣ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.