ADVERTISEMENT

ಚಿಕ್ಕಬಾಣಾವರ ಕೆರೆ ಕಲುಷಿತ

ದುರ್ವಾಸನೆಗೆ ಬೇಸತ್ತ ಗ್ರಾಮಸ್ಥರು *ಜಲಚರಗಳ ಪ್ರಾಣಕ್ಕೆ ಕುತ್ತು

​ಪ್ರಜಾವಾಣಿ ವಾರ್ತೆ
Published 17 ಜನವರಿ 2021, 17:23 IST
Last Updated 17 ಜನವರಿ 2021, 17:23 IST
ಚಿಕ್ಕಬಾಣಾವರ ಕೆರೆಯಲ್ಲಿ ಕತ್ತೆ ಕಿವಿ ಬೆಳೆದಿರುವುದು
ಚಿಕ್ಕಬಾಣಾವರ ಕೆರೆಯಲ್ಲಿ ಕತ್ತೆ ಕಿವಿ ಬೆಳೆದಿರುವುದು   

ಹೆಸರಘಟ್ಟ: ಕೊಳೆಯುತ್ತಿರುವ ಸಸ್ಯಗಳು, ಚೀಲದಲ್ಲಿ ತುಂಬಿ ಬಿಸಾಕಿದ ಕುರಿ–ಕೋಳಿ ಮಾಂಸ, ಹರಿದು ಬರುತ್ತಿರುವ ಚರಂಡಿ ನೀರು... ಇದೆಲ್ಲದರಿಂದ ಚಿಕ್ಕಬಾಣಾವರ ಕೆರೆ ಕಲುಷಿತಗೊಂಡಿದ್ದು, ದುರ್ವಾಸನೆ ಬೀರುತ್ತಿದೆ.

‘ವರ್ಷದಿಂದ ವರ್ಷಕ್ಕೆ ಕೆರೆ ಹೆಚ್ಚು ಕಲುಷಿತಗೊಳ್ಳುತ್ತಿದೆ. ಚರಂಡಿ ನೀರು ಕೆರೆಗೆ ಸೇರುತ್ತಿದ್ದು, ಜಲಚರಗಳ ಪ್ರಾಣಕ್ಕೆ ಕುತ್ತು ಬಂದಿದೆ. ಕೆರೆಯನ್ನು ಆಭಿವೃದ್ದಿ ಪಡಿಸಲು ಯಾವ ಜನಪ್ರತಿನಿಧಿಗಳು, ಅಧಿಕಾರಿಗಳು ಮುಂದೆ ಬಂದಿಲ್ಲ’ ಎಂದು ಗ್ರಾಮದ ನಿವಾಸಿ ಕೃಷ್ಣಪ್ಪ ಬೇಸರ ವ್ಯಕ್ತಪಡಿಸಿದರು.

‘ಕೆರೆಯ ಅಸುಪಾಸಿನಲ್ಲಿ ಸುಮಾರು ಎರಡು ನೂರು ಮನೆಗಳಿವೆ. ಈ ಮನೆಗಳಲ್ಲಿ ವಾಸಿಸುವವರು ಕೆರೆಯಿಂದ ಬರುವ ವಾಸನೆಯನ್ನು ಸಹಿಸಿಕೊಂಡು ಬದುಕಬೇಕಾಗಿದೆ. ದುರ್ವಾಸನೆಯಿಂದ ಆರೋಗ್ಯದಲ್ಲಿ ಏರು–ಪೇರು ಉಂಟಾಗುತ್ತಿದೆ’ ಎಂದರು.

ADVERTISEMENT

‘ದಾಸರಹಳ್ಳಿಯ ಈ ಹಿಂದಿನ ಶಾಸಕರು ಮತ್ತು ಈಗಿನ ಶಾಸಕರು ಕೂಡ ಕೆರೆ ಅಭಿವೃದ್ಧಿ ಕಡೆಗೆ ಗಮನ ಕೊಡುತ್ತಿಲ್ಲ. ನಮ್ಮೂರಿನ ಕೆರೆ ಯಾವಾಗ ಮೊದಲಿನಂತೆ ಆಗುತ್ತದೆಯೋ ನೋಡಬೇಕು’ ಎಂದು ನಿವಾಸಿ ಮಂಜುಳಾ ಹೇಳಿದರು.

ಕೆರೆ ನಿರ್ವಹಣೆಗೆ ಸಂಬಂಧಿಸಿದಂತೆ ಅಧಿಕಾರಿಗಳು ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.