ADVERTISEMENT

ಹೆಸರಘಟ್ಟ ಮುಖ್ಯ ರಸ್ತೆ ಅಭಿವೃದ್ಧಿಗೆ ಕೊನೆಗೂ ಚಾಲನೆ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2022, 20:40 IST
Last Updated 9 ಫೆಬ್ರುವರಿ 2022, 20:40 IST
ರಸ್ತೆ ಅಭಿವೃದ್ಧಿ ಕಾಮಗಾರಿಗೆ 8ನೇ ಮೈಲಿ ಬಳಿ ಶಾಸಕ ಆರ್‌.ಮಂಜುನಾಥ್ ಚಾಲನೆ ನೀಡಿದರು. ಮುಖಂಡರಾದ ಮುನಿಸ್ವಾಮಣ್ಣ, ಕೆ.ಸಿ. ವೆಂಕಟೇಶ್, ಬಿ.ಎನ್.ಜಗದೀಶ್, ಚರಣ್‌ಗೌಡ, ತಮ್ಮಣ್ಣ, ಹನುಮಂತರಾಜು, ಗೋಪಾಲ್, ಸಿ.ಜೆ.ರಮೇಶ್ ಇದ್ದರು
ರಸ್ತೆ ಅಭಿವೃದ್ಧಿ ಕಾಮಗಾರಿಗೆ 8ನೇ ಮೈಲಿ ಬಳಿ ಶಾಸಕ ಆರ್‌.ಮಂಜುನಾಥ್ ಚಾಲನೆ ನೀಡಿದರು. ಮುಖಂಡರಾದ ಮುನಿಸ್ವಾಮಣ್ಣ, ಕೆ.ಸಿ. ವೆಂಕಟೇಶ್, ಬಿ.ಎನ್.ಜಗದೀಶ್, ಚರಣ್‌ಗೌಡ, ತಮ್ಮಣ್ಣ, ಹನುಮಂತರಾಜು, ಗೋಪಾಲ್, ಸಿ.ಜೆ.ರಮೇಶ್ ಇದ್ದರು   

ಬೆಂಗಳೂರು: ‌ಕಲ್ಲು ಗುಂಡಿಗಳ ಹಾದಿಯಾಗಿದ್ದ ಹೆಸರಘಟ್ಟ ಮುಖ್ಯರಸ್ತೆ ಅಭಿವೃದ್ಧಿಗೆ ಕೊನೆಗೂ ಕಾಲ ಕೂಡಿ ಬಂದಿದೆ. ₹15 ಕೋಟಿ ವೆಚ್ಚದಲ್ಲಿ ರಸ್ತೆ ನಿರ್ಮಾಣ ಮಾಡುವ ಕಾಮಗಾರಿಗೆ ಬುಧವಾರ ಚಾಲನೆ ದೊರೆತಿದೆ.

ತುಮಕೂರು ರಸ್ತೆಯ 8ನೇ ಮೈಲಿಯಿಂದ ಚಿಕ್ಕಬಾಣಾವರ ವೃತ್ತದ ತನಕದ ರಸ್ತೆ ಮೇಲ್ದರ್ಜೆಗೇರಿಸುವ ಕೆಲಸಕ್ಕೆ ದಾಸರಹಳ್ಳಿ ಶಾಸಕ ಆರ್.ಮಂಜುನಾಥ್ ಚಾಲನೆ ನೀಡಿದರು. ಒಳಚರಂಡಿ, ಬೀದಿದೀಪ ಅಳವಡಿಕೆ ಮತ್ತು ಗುಣಮಟ್ಟದ ಡಾಂಬರು ರಸ್ತೆಯನ್ನಾಗಿ ಅಭಿವೃದ್ಧಿಪಡಿಸಲು ಯೋಜನೆ ರೂಪುಗೊಂಡಿದೆ.

ಹೆಸರಘಟ್ಟ ಮುಖ್ಯ ರಸ್ತೆಯಲ್ಲಿ ವಾಹನ ಚಾಲನೆ ಮಾಡುವುದೆಂದರೆ ಸಾಹಸದ ಕೆಲಸವಾಗಿತ್ತು. ‌ಹೆಜ್ಜೆ ಹೆಜ್ಜೆಗೂ ಸಿಗುವ ಗುಂಡಿಗಳನ್ನು ತಪ್ಪಿಸಿ ವಾಹನ ಚಾಲನೆ ಮಾಡಲು ಸಾಧ್ಯವೇ ಇಲ್ಲದ ಸ್ಥಿತಿ ಇತ್ತು. ರಸ್ತೆ ಮಧ್ಯದಲ್ಲಿ ಇದ್ದ ಕುಡಿಯುವ ನೀರು ಸರಬರಾಜಿನ ಪೈಪ್‌ಲೈನ್ ದುರಸ್ತಿಪಡಿಸಲು ಜಲಮಂಡಳಿ ಅಧಿಕಾರಿಗಳು ಗುಂಡಿ ತೋಡಿದ್ದರು.

ADVERTISEMENT

ತಿಂಗಳು ಕಳೆದರೂ ಗುಂಡಿ ಮುಚ್ಚದಿದ್ದರಿಂದ 2021ರ ಸೆ.1ರಂದು ಮಲ್ಲಸಂದ್ರದ ದ್ವಿಚಕ್ರ ವಾಹನ ಸವಾರ ಆನಂದ್ ಇದೇ ಗುಂಡಿಗೆ ಬಿದ್ದು ಮೃತಪಟ್ಟಿದ್ದರು. ಬೈಕ್ ಸವಾರ ಮೃತಪಟ್ಟರೂ ಗುಂಡಿ ಮುಚ್ಚದಿರುವ ಬಗ್ಗೆ ಮತ್ತು 8ನೇ ಮೈಲಿಯಿಂದ ಚಿಕ್ಕಬಾಣಾವರ ತಲುಪಲು ವಾಹನ ಸವಾರರ ಪ್ರಯಾಸದ ಬಗ್ಗೆ ‘ಪ್ರಜಾವಾಣಿ’ ವರದಿ ಪ್ರಕಟಿಸಿತ್ತು.

‘ಕ್ಷೇತ್ರದಲ್ಲಿ ಒಟ್ಟು ₹48 ಕೋಟಿ ಮೊತ್ತದ ಕಾಮಗಾರಿಗೆ ಚಾಲನೆ ನೀಡಲಾ
ಗಿದೆ’ ಎಂದು ಮಂಜುನಾಥ್ ತಿಳಿಸಿದರು.

‘110 ಹಳ್ಳಿ ಯೋಜನೆಯಡಿ ಒಳಚರಂಡಿ ಮತ್ತು ಕಾವೇರಿ ನೀರಿನ ಪೈಪ್‌ಲೈನ್ ಅಳವಡಿಕೆಗೆ ಅಗೆದಿದ್ದ ರಸ್ತೆಗಳ ಮರು ನಿರ್ಮಾಣಕ್ಕೆ ₹18 ಕೋಟಿ ಮೊತ್ತದ ಕಾಮಗಾರಿಗೂ ಚಾಲನೆ ನೀಡಲಾಗಿದೆ. ಇದಲ್ಲದೇ ವಾರ್ಡ್‌ ರಸ್ತೆಗಳ ಅಭಿವೃದ್ಧಿಗೆ ₹15 ಕೋಟಿ ಮೊತ್ತದಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ’ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.