ADVERTISEMENT

ಬೆಳೆವಿಮೆ ಪಾವತಿ ವಿಳಂಬ: ಸರ್ಕಾರಕ್ಕೆ ಹೈಕೋರ್ಟ್ ತರಾಟೆ

​ಪ್ರಜಾವಾಣಿ ವಾರ್ತೆ
Published 14 ಜನವರಿ 2021, 3:51 IST
Last Updated 14 ಜನವರಿ 2021, 3:51 IST
ಹೈಕೋರ್ಟ್
ಹೈಕೋರ್ಟ್   

ಬೆಂಗಳೂರು: ಪ್ರಧಾನ ಮಂತ್ರಿ ಫಸಲ್‌ ಬಿಮಾ ಯೋಜನೆಯಡಿ 2016ರಿಂದ ಬೆಳೆವಿಮೆ ಬಾಕಿ ಉಳಿಸಿಕೊಂಡಿರುವ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಹೈಕೋರ್ಟ್‌, ಒಂದು ವಾರದಲ್ಲಿ ಫಲಾನುಭವಿಗಳಿಗೆ ವಿಮಾ ಮೊತ್ತ ‍ಪಾವತಿ ಮಾಡಬೇಕು ಎಂದು ನಿರ್ದೇಶನ ನೀಡಿದೆ.

ರೈತರ ಆತ್ಮಹತ್ಯೆ ಪ್ರಕರಣ ಮತ್ತು ಬೆಳೆವಿಮೆ ವಿತರಣೆಯಲ್ಲಿನ ವಿಳಂಬ ಪ್ರಶ್ನಿಸಿ ಅಖಂಡ ಕರ್ನಾಟಕ ರೈತ ಸಂಘ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

‘2016ರಲ್ಲಿ ಈ ಯೋಜನೆ ಆರಂಭಿಸಲಾಗಿದೆ. ಆದರೆ ಜಿಲ್ಲಾ ಮಟ್ಟದ ಕುಂದು ಕೊರತೆಗಳ ಪರಿಹಾರ ಸಮಿತಿಯನ್ನು 2019ರಲ್ಲಿ ರಚಿಸಲಾಗಿದೆ. 189 ರೈತರ ಬ್ಯಾಂಕ್ ಖಾತೆಗಳು ನಿಷ್ಕ್ರಿಯವಾಗಿರುವ ಕಾರಣ ಬೆಳೆವಿಮೆ ಪರಿಹಾರ ಸಾಧ್ಯವಾಗಿಲ್ಲ’ ಎಂದು ಸರ್ಕಾರ ಅಫಿಡವಿಟ್ ಸಲ್ಲಿಸಿದೆ.

ADVERTISEMENT

‘ಸರ್ಕಾರ ಸೂಕ್ಷ್ಮತೆ ಇಲ್ಲದೆ ವರ್ತಿಸಿದೆ ಎಂಬುದನ್ನು ಈ ಅಫಿಡವಿಟ್ ಹೇಳುತ್ತಿದೆ. ರೈತರನ್ನು ಪತ್ತೆ ಹಚ್ಚುವುದು ಸರ್ಕಾರಕ್ಕೆ ದೊಡ್ಡ ಕೆಲಸ ಅಲ್ಲ. ಒಂದು ವಾರದಲ್ಲಿ ಎಲ್ಲಾ ಪ್ರಕ್ರಿಯೆ ಪೂರ್ಣಗೊಳಿಸಿ ರೈತರಿಗೆ ವಿಮಾ ಮೊತ್ತ ಪಾವತಿಸಬೇಕು. ವಿಫಲವಾದರೆ ಬಡ್ಡಿ ಸಹಿತ ಪಾವತಿಸಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.