ADVERTISEMENT

ಕೊಲೆ ಆರೋಪ: ಇಬ್ಬರು ತೃತೀಯ ಲಿಂಗಿಗಳಿಗೆ ಜಾಮೀನು

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2020, 19:31 IST
Last Updated 27 ಡಿಸೆಂಬರ್ 2020, 19:31 IST
ಹೈಕೋರ್ಟ್
ಹೈಕೋರ್ಟ್   

ಬೆಂಗಳೂರು: ಟೋಲ್ ಪ್ಲಾಜಾ ಬಳಿ ಹಣ ಸಂಗ್ರಹಿಸುವ ವಿಷಯದಲ್ಲಿನ ಜಗಳದಲ್ಲಿ ತೃತೀಯ ಲಿಂಗಿಯೊಬ್ಬರನ್ನು ಕೊಲೆ ಮಾಡಿದ್ದ ಆರೋಪದಲ್ಲಿ ಬಂಧನದಲ್ಲಿದ್ದ ಇಬ್ಬರು ಆರೋಪಿಗಳಿಗೆ ಹೈಕೋರ್ಟ್‌ ಜಾಮೀನು ನೀಡಿದೆ.

ನಿತ್ಯಾ ಅಲಿಯಾಸ್ ರಾಮಕೃಷ್ಣ, ದೇವಿ ಅಲಿಯಾಸ್ ಅಶೋಕ್‌ಕುಮಾರ್ ಸಲ್ಲಿಸಿದ್ದ ಅರ್ಜಿ ಪುರಸ್ಕರಿಸಿದ ನ್ಯಾಯಮೂರ್ತಿ ಶ್ರೀನಿವಾಸ್ ಹರೀಶ್‌ಕುಮಾರ್ ಅವರಿದ್ದ ಪೀಠ, ಈ ಆದೇಶ ನೀಡಿದೆ.

2020ರ ಆ.14ರಂದು ಎಲೆಕ್ಟ್ರಾನಿಕ್ ಸಿಟಿಯ ನೈಸ್ ರಸ್ತೆ ಟೋಲ್ ಪ್ಲಾಜಾ ಬಳಿ ತೃತೀಯ ಲಿಂಗಿಯೊಬ್ಬರು ಭಿಕ್ಷೆ ಬೇಡುತ್ತಿದ್ದರು. ಅಲ್ಲಿಗೆ ಕ್ಯಾಬ್‌ನಲ್ಲಿ ಬಂದ ಆರೋಪಿಗಳು ಭಿಕ್ಷೆ ಬೇಡುತ್ತಿದ್ದ ತೃತೀಯ ಲಿಂಗಿಯನ್ನು ಹತ್ತಿಸಿಕೊಂಡು ಮನೆಗೆ ಕರೆದೊಯ್ದು ಅಲ್ಲಿ ದೊಣ್ಣೆಯಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದರು. ಮೃತದೇಹವನ್ನು ಅವರ ಸ್ವಗ್ರಾಮಕ್ಕೆ ಕೊಂಡೊಯ್ದ ಆರೋಪಿಗಳು, ಅಪರಿಚಿತ ಲಾರಿ ಚಾಲಕರು ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ ಎಂದು ಬಿಂಬಿಸಿದ್ದರು ಎಂಬುದು ಆರೋಪಿಗಳ ವಿರುದ್ಧ ಇದ್ದ ಆರೋಪ.

ADVERTISEMENT

‘ಆರೋಪಿಗಳೇ ಕೊಲೆ ಮಾಡಿದ್ದಾರೆ ಎಂಬುದಕ್ಕೆ ಸಾಕ್ಷ್ಯಗಳಿಲ್ಲ. ಮನೆಯಲ್ಲಿ ದೊಣ್ಣೆ ಸಿಕ್ಕಿದೆ ಎಂಬ ಕಾರಣಕ್ಕೆ ಇವರನ್ನು ಬಂಧಿಸಲಾಗಿದೆ. ಅದೊಂದೇ ಸಾಕ್ಷ್ಯವನ್ನು ಪರಿಗಣಿಸಲು ಸಾಧ್ಯವಿಲ್ಲ’ ಎಂದು ಪೀಠ ಅಭಿಪ್ರಾಯಪಟ್ಟಿತು.

‘ಕ್ಯಾಬ್‌ನಲ್ಲಿ ಕರೆದೊಯ್ದರು ಎಂಬುದನ್ನು ಸಾಬೀತುಪಡಿಸುವ ಯಾವ ಅಂಶವೂ ಕ್ಯಾಬ್ ಚಾಲಕನ ಹೇಳಿಕೆಯಲ್ಲಿ ಇಲ್ಲ. ಆದ್ದರಿಂದ ಈ ಹಂತದಲ್ಲಿ ಕೊಲೆ ಪ್ರಕರಣದಲ್ಲಿ ಅರ್ಜಿದಾರರ ಪಾತ್ರವಿದೆ ಎಂಬುದನ್ನು ನಿರ್ಧರಿಸಲು ಆಗುವುದಿಲ್ಲ’ ಎಂದು ತಿಳಿಸಿದ ಪೀಠ, ಆರೋಪಿಗಳಿಗೆ ಷರತ್ತುಬದ್ಧ ಜಾಮೀನು ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.