ADVERTISEMENT

ಯಾರದೋ ಪ್ರಾಪರ್ಟಿ, ಎಲ್ಲಮ್ಮನ ಜಾತ್ರೆ...!!

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2018, 19:37 IST
Last Updated 15 ನವೆಂಬರ್ 2018, 19:37 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು: ‘ನಕಲಿ ದಾಖಲೆ ಸೃಷ್ಟಿಸಿ ಬ್ಯಾಂಕುಗಳಿಂದ ಸಾಲ ಪಡೆದು ವಂಚಿಸಲಾಗುತ್ತಿದೆ’ ಎಂಬ ಆರೋಪಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಹೈಕೋರ್ಟ್‌, ಬ್ಯಾಂಕ್‌ ಅಧಿಕಾರಿಗಳ ವರ್ತನೆಗೆ ಕಿಡಿ ಕಾರಿದೆ.

‘ಈ ಕುರಿತಂತೆ ದೂರು ನೀಡಿರುವ ನನ್ನ ವಿರುದ್ಧವೇ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ’ ಎಂದು ರಾಜರಾಜೇಶ್ವರಿ ನಗರದ ಎಂ.ರವಿಶಂಕರ್ ಸಲ್ಲಿಸಿರುವ ರಿಟ್‌ ಅರ್ಜಿಯನ್ನು ನ್ಯಾಯಮೂರ್ತಿ ಬಿ.ವೀರಪ್ಪ ಅವರಿದ್ದ ಏಕಸದಸ್ಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ವಕೀಲ ಡಿ.ಆರ್.ರವಿಶಂಕರ್‌ ಅವರು, ‘ಅಪಾರ್ಟ್‌ಮೆಂಟ್‌ ಖರೀದಿಗೆ ಅಗತ್ಯವಾದ ಸೇಲ್‌ ಡೀಡ್‌, ಖಾತೆ, ಎನ್‌ಕಂಬರೆನ್ಸ್‌... ಇತ್ಯಾದಿ ನಕಲಿ ದಾಖಲೆಗಳನ್ನೇ ತಯಾರು ಮಾಡುವ ಜಾಲವಿದೆ. ಇದರ ಸೂತ್ರಧಾರನ ವಿರುದ್ಧ ನಾನು ದೂರು ನೀಡಿದರೆ ಪೊಲೀಸರು ನನ್ನ ವಿರುದ್ಧವೇ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಹೊರಿಸಿದ್ದಾರೆ. ಆದ್ದರಿಂದ ಈ ಪ್ರಕರಣವನ್ನು ವಿಶೇಷ ತನಿಖಾ ತಂಡಕ್ಕೆ ಒಪ್ಪಿಸಬೇಕು’ ಎಂದು ಕೋರಿದರು.

ADVERTISEMENT

ಈ ಮಾತಿಗೆ ಸರ್ಕಾರಿ ವಕೀಲರನ್ನು ತರಾಟೆಗೆ ತೆಗೆದುಕೊಂಡ ನ್ಯಾಯಮೂರ್ತಿಗಳು, ‘ಪ್ರಕರಣವನ್ನು ಬೇರೊಂದು ತನಿಖಾ ಸಂಸ್ಥೆಗೆ ವಹಿಸಲು ಏನಾಗಿದೆ? ಪೊಲೀಸರೇ ಇದರಲ್ಲಿ ಶಾಮೀಲಾಗಿದ್ದಾರೆ ಎಂದು ಅರ್ಜಿದಾರರ ಪರ ವಕೀಲರು ಹೇಳುತ್ತಿದ್ದಾರೆ. ಈ ಬ್ಯಾಂಕ್‌ ಅಧಿಕಾರಿಗಳು ಎಲ್ಲಾ ಸ್ವಾಹ ಮಾಡುತ್ತಿದ್ದಾರೆ, ನೀವು ಸುಮ್ಮನಿದ್ದೀರಿ. ಈ ಪೊಲೀಸರು ಕಾನೂನು ಸುವ್ಯವಸ್ಥೆ ನೋಡಿಕೊಳ್ಳುವುದನ್ನು ಬಿಟ್ಟು ಬರೀ ಅಡ್ಜಸ್ಟ್‌ಮೆಂಟ್‌ ವ್ಯವಹಾರ ಮಾಡುತ್ತಾರೆ’ ಎಂದು ಕಿಡಿ ಕಾರಿದರು.

ಈ ಕುರಿತಂತೆ ಆಕ್ಷೇಪಣೆ ಸಲ್ಲಿಸಿ ಎಂದು ಸರ್ಕಾರಿ ವಕೀಲರಿಗೆ ಸೂಚಿಸಿದರು. ಅಂತೆಯೇ ಪ್ರಕರಣದ ಪ್ರಮುಖ ಸೂತ್ರಧಾರನನ್ನೂ ಅರ್ಜಿಯಲ್ಲಿ ಪ್ರತಿವಾದಿಯನ್ನಾಗಿಸಿ ಎಂದು ಸೂಚಿಸಿ ಅರ್ಜಿದಾರರ ಪರ ವಕೀಲರಿಗೆ ಸೂಚಿಸಿ ವಿಚಾರಣೆ ಮುಂದೂಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.