ADVERTISEMENT

ಕೋವಿಡ್ ಜಾಗೃತಿ | ಜಾಹೀರಾತು ಫಲಕ ಅಳವಡಿಕೆಗೆ ಹೈಕೋರ್ಟ್‌ ಅನುಮತಿ

​ಪ್ರಜಾವಾಣಿ ವಾರ್ತೆ
Published 15 ಜುಲೈ 2020, 19:49 IST
Last Updated 15 ಜುಲೈ 2020, 19:49 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು: ಕೋವಿಡ್‌ ಹರಡುವಿಕೆ ತಡೆಯುವ ಜಾಗೃತಿ ಸಂದೇಶಗಳನ್ನು ಒಳಗೊಂಡ ಜಾಹೀರಾತು ಫಲಕಗಳನ್ನು ಅಳವಡಿಸಲು ಬಿಬಿಎಂಪಿಗೆ ಹೈಕೋರ್ಟ್ ಷರತ್ತುಬದ್ಧ ಅನುಮತಿ ನೀಡಿದೆ. ನಿರ್ಬಂಧಿತ ಸಾಮಗ್ರಿ ಮತ್ತು ವಾಣಿಜ್ಯ ಜಾಹೀರಾತುಗಳಿಗೆ ಅವಕಾಶ ನೀಡದಂತೆ ನಿರ್ದೇಶನ ನೀಡಿದೆ.

ಪ್ಲಾಸ್ಟಿಕ್ ಸಾಮಗ್ರಿಗಳಿಂದ ತಯಾರಿಸುವ ಜಾಹೀರಾತು ಸಂಪೂರ್ಣ ನಿಷೇಧ ಮಾಡಬೇಕು ಎಂದು ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ಮತ್ತು ನ್ಯಾಯಮೂರ್ತಿಅಲೋಕ್ ಆರಾಧೆ ಅವರಿದ್ದ ವಿಭಾಗೀಯ ಪೀಠವು ಈ ಆದೇಶ ನೀಡಿದೆ.

‘ಯಾವುದೇ ವ್ಯಕ್ತಿ ಅಥವಾ ಉತ್ಪನ್ನ ಪ್ರಚಾರ ಮಾಡಲು ನ್ಯಾಯಾಲಯ ಅನುಮತಿ ನೀಡುವುದಿಲ್ಲ. ಸೋಂಕಿನ ಕುರಿತ ಜಾಗೃತಿ ಸಂದೇಶಗಳನ್ನು ಹೊರತುಪಡಿಸಿ ಬೇರೆ ಮಾಹಿತಿ ನೀಡುವಂತಿಲ್ಲ.ಕೊರೊನಾ ಪರೀಕ್ಷಾ ಕೇಂದ್ರಗಳ ಮಾಹಿತಿ, ಯಾವ ಆಸ್ಪತ್ರೆಯಲ್ಲಿ ಎಷ್ಟು ಹಾಸಿಗೆ ಲಭ್ಯ ಇವೆ ಎಂಬ ಮಾಹಿತಿಯನ್ನೂ ನೀಡಬೇಕು’ ಎಂದು ಪೀಠ ತಿಳಿಸಿದೆ.

ADVERTISEMENT

ಎಲ್ಲೆಲ್ಲಿ ಜಾಹೀರಾತು ಫಲಕ ಅಳವಡಿಸಲಾಗುವುದು ಎಂಬ ಪಟ್ಟಿಯನ್ನು ಒಳಗೊಂಡ ಪ್ರಮಾಣಪತ್ರ ಸಲ್ಲಿಸಿರುವ ಬಿಬಿಎಂಪಿ ಆಯುಕ್ತ ಬಿ.ಎಚ್. ಅನಿಲ್‌ಕುಮಾರ್, ‘ಕೊರೊನಾ ಸೋಂಕು ಹರಡುವಿಕೆ ತಡೆಗಟ್ಟಲು ಮುನ್ನೆಚ್ಚರಿಕಾ ಕ್ರಮಗಳ ಕುರಿತು ಹೋರ್ಡಿಂಗ್‌ಗಳಲ್ಲಿ ಪ್ರಚಾರ ಮಾಡಲಾಗುವುದು.ಈ ಉದ್ದೇಶಕ್ಕಾಗಿಯೇ ಬಿಬಿಎಂಪಿ ಬಜೆಟ್‌ನಲ್ಲಿ ₹49.50 ಕೋಟಿ ಮೀಸಲಿಟ್ಟಿದೆ’ ಎಂದು ವಿವರಿಸಿದ್ದಾರೆ.

‘ಅಷ್ಟೂ ಮೊತ್ತವನ್ನು ಹೋರ್ಡಿಂಗ್ ಪ್ರದರ್ಶನಕ್ಕಾಗಿ ಬಳಸಲಾಗುತ್ತದೆ ಎಂಬುದು ಈ ಹೇಳಿಕೆಯ ಅರ್ಥವಲ್ಲ. ಕಾಯ್ದಿರಿಸಲಾದ ಒಟ್ಟು ಮೊತ್ತದಲ್ಲಿ ಸಮಂಜಸವಾದ ಮೊತ್ತವನ್ನು ಬಿಬಿಎಂಪಿ ಬಳಸಿಕೊಳ್ಳಲಿದೆ ಎಂಬ ವಿಶ್ವಾಸ ಮತ್ತು ನಂಬಿಕೆ ನಮಗಿದೆ. ಹೋರ್ಡಿಂಗ್‌ಗಳ ಪ್ರದರ್ಶನ ನಿರ್ದಿಷ್ಟ ಅವಧಿಗೆ ಸೀಮಿತ ಎಂಬುದು ಸ್ಪಷ್ಟ. ಸೋಂಕು ನಿಯಂತ್ರಣಕ್ಕೆ ಬಂದ ಬಳಿಕ‌ ಸೂಕ್ತ ಸಮಯದೊಳಗೆ ಬಿಬಿಎಂಪಿ ಈ ಹೋರ್ಡಿಂಗ್‌ಗಳನ್ನು ತೆರವುಗೊಳಿಸಲಿದೆ’ ಎಂದು ಪೀಠ ಹೇಳಿತು.

ಅಕ್ರಮ ಜಾಹೀರಾತು ಫಲಕಗಳನ್ನು ತೆರವುಗೊಳಿಸುವಂತೆ2019ರ ನವೆಂಬರ್‌ನಲ್ಲಿ ಮಧ್ಯಂತರ ಆದೇಶವನ್ನು ಹೈಕೋರ್ಟ್‌ ನೀಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.