ADVERTISEMENT

ಬೆಸ್ಕಾಂ: 5,659 ಟ್ರಾನ್ಸ್‌ಫಾರ್ಮರ್‌ ಸ್ಥಳಾಂತರ ಶುರು

ಹೈಕೋರ್ಟ್ ಗೆ ಬೆಸ್ಕಾಂ ಮಾಹಿತಿ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2022, 19:13 IST
Last Updated 18 ಏಪ್ರಿಲ್ 2022, 19:13 IST
   

ಬೆಂಗಳೂರು: ‘ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಪಾದಚಾರಿ ಮಾರ್ಗಗಳಲ್ಲಿ ಅಳವಡಿಸಿರುವ ಸುಮಾರು 5 ಸಾವಿರಕ್ಕೂ ಹೆಚ್ಚು ವಿದ್ಯುತ್ ಟ್ರಾನ್ಸ್‌ಫಾರ್ಮರ್‌ ಸ್ಥಳಾಂತರ ಪ್ರಕ್ರಿಯೆ ಏಪ್ರಿಲ್ 1ರಿಂದಲೇ ಆರಂಭವಾಗಿದೆ’ ಎಂದು ಬೆಸ್ಕಾಂ ಹೈಕೋರ್ಟ್‌ಗೆ ಮಾಹಿತಿ ನೀಡಿದೆ.

‘ನಗರದಲ್ಲಿನ ಪಾದಚಾರಿ ಮಾರ್ಗ ಹಾಗೂ ರಾಜಕಾಲುವೆಗಳ ಮೇಲಿರುವ ಟ್ರಾನ್ಸ್‌ಫಾರ್ಮರ್‌ ತೆರವುಗೊಳಿಸಲು ನಿರ್ದೇಶಿಸಬೇಕು’ ಎಂದು ಕೋರಿ ನಿವೃತ್ತ ವಿಂಗ್ ಕಮಾಂಡರ್‌ ವಿ.ಜಿ. ಅತ್ರಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಋತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.

ಬೆಸ್ಕಾಂ ಪರ ವಕೀಲರಾದ ಎಸ್. ಶ್ರೀರಂಗ, ‘ಹೈಕೋರ್ಟ್ ನಿರ್ದೇಶನದಂತೆ ಬೆಸ್ಕಾಂ ಮತ್ತು ಬಿಬಿಎಂಪಿ ಅಧಿಕಾರಿಗಳನ್ನು ಒಳಗೊಂಡ ಸಮಿತಿ ಅಧ್ಯಯನ ನಡೆಸಿದೆ. ಸ್ಥಳಾಂತರಿಸಬೇಕಾದ 8,659 ಟ್ರಾನ್ಸ್‌ಫಾರ್ಮರ್‌ಗಳನ್ನು ಗುರುತಿಸಲಾಗಿದ್ದು, ಅವುಗಳ ಪೈಕಿ 3,000 ಟ್ರಾನ್ಸ್‌ಫಾರ್ಮರ್‌ಗಳನ್ನು ಈಗಾಗಲೇ ಸ್ಥಳಾಂತರ ಅಥವಾ ಎತ್ತರಿಸಲಾಗಿದೆ’ ಎಂದು ತಿಳಿಸಿದರು.

ADVERTISEMENT

‘ಇನ್ನುಳಿದ 5,000 ಟ್ರಾನ್ಸ್‌ಫಾರ್ಮರ್‌ ಸ್ಥಳಾಂತರಕ್ಕೆ ಯೋಜನೆ ರೂಪಿಸಿ ಕ್ರಮ ಕೈಗೊಳ್ಳಲಾಗುತ್ತಿದೆ. ಆ ಬಗ್ಗೆ ಕೋರ್ಟ್‌ಗೆ ವಿವರವಾದ ವರದಿ ಸಲ್ಲಿಸಲಾಗಿದೆ’ ಎಂದು ಹೇಳಿದರು.

‘ವಿದ್ಯುತ್ ಪರಿವರ್ತಕಗಳ ಸಂಪೂರ್ಣ ಸ್ಥಳಾಂತರ ಕಾರ್ಯಕ್ಕೆ ಸುಮಾರು ₹ 100 ಕೋಟಿ ಖರ್ಚಾಗುವ ಅಂದಾಜಿದೆ. ಈಗಾಗಲೇ ಟೆಂಡರ್ ಅಂತಿಮಗೊಳಿಸಿ ಕಾರ್ಯಾದೇಶ ನೀಡಲಾಗಿದೆ. ಇದೇ 1ರಿಂದ ಸ್ಥಳಾಂತರ ಕಾಮಗಾರಿಯೂ ಆರಂಭವಾಗಿದೆ. ವಿದ್ಯುತ್ ಪರಿವರ್ತಕಗಳ ಸಂಪೂರ್ಣ ಸ್ಥಳಾಂತರಕ್ಕೆ 18 ತಿಂಗಳ ಕಾಲಾವಕಾಶ ಬೇಕು’ ಎಂದು ಶ್ರೀರಂಗ ಕೋರಿದರು.

‘ವಿಚಾರಣೆಯನ್ನು ಜುಲೈಗೆ ಮುಂದೂಡಿದರೆ ಅಷ್ಟರಲ್ಲಿ ಕಾಮಗಾರಿ ಪ್ರಗತಿಯ ವರದಿ ಸಲ್ಲಿಸಲಾಗುವುದು’ ಎಂದೂ ಅವರು ಇದೇ ವೇಳೆ ನ್ಯಾಯಪೀಠಕ್ಕೆ ತಿಳಿಸಿದರು.

ಇದನ್ನು ದಾಖಲಿಸಿಕೊಂಡ ನ್ಯಾಯಪೀಠ ಜುಲೈ ಮೊದಲ ವಾರಕ್ಕೆ ವಿಚಾರಣೆ ಮುಂದೂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.