ADVERTISEMENT

ಬ್ರೈಲ್‌ ಲಿಪಿ ಪಠ್ಯ: ಟೆಂಡರ್‌ಗೆ ಗಡುವು

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2022, 20:13 IST
Last Updated 4 ಏಪ್ರಿಲ್ 2022, 20:13 IST

ಬೆಂಗಳೂರು:ಅಂಧ ವಿದ್ಯಾರ್ಥಿಗಳಿಗೆ ಅಗತ್ಯವಿರುವ ಬ್ರೈಲ್ ಲಿಪಿಯ ಪಠ್ಯ ಪುಸ್ತಕಗಳನ್ನು ಇ-ಪಠ್ಯಕ್ಕೆ (ಆಡಿಯೊ ಕಂಪ್ಯಾಟಬಲ್ ಮಾದರಿಗೆ) ಪರಿವರ್ತನೆ ನಿಟ್ಟಿನಲ್ಲಿ ಕರೆಯಲಾಗಿರುವ ಟೆಂಡರ್ ಅಂತಿಮಗೊಳಿಸಲು ಹೈಕೋರ್ಟ್, ಜೂನ್‌ವರೆಗೆ ಗಡುವು ನೀಡಿದೆ.

ಈ ಸಂಬಂಧ, ‘ದಿ ನ್ಯಾಷನಲ್ ಫೆಡರೇಷನ್ ಆಫ್ ದಿ ಬ್ಲೈಂಡ್’ ಸಂಸ್ಥೆ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಋತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಹೆಚ್ಚುವರಿ ಸರ್ಕಾರಿ ವಕೀಲ ಎ. ವಿಜಯಕುಮಾರ್ ಪಾಟೀಲ್, ‘ರಾಜ್ಯದಾದ್ಯಂತ ನಡೆಸಲಾಗಿರುವ ಸರ್ವೇಯಲ್ಲಿ ಒಟ್ಟು 1,692 ಅಂಧ ಮಕ್ಕಳು ವಿವಿಧ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಈಗಾಗಲೇ ಬ್ರೈಲ್ ಲಿಪಿಯ 152 ಪಠ್ಯ ಪುಸ್ತಕಗಳ ಇ-ಸಾಫ್ಟ್‌ವೇರ್ ಅಭಿವೃದ್ಧಿಪಡಿಸಿ, ವಿದ್ಯಾರ್ಥಿಗಳಿಗೆ ಒದಗಿಸಲಾಗಿದೆ. ತಮಿಳು, ತೆಲುಗು ಸೇರಿದಂತೆ ಒಟ್ಟು ಏಳು ಭಾಷೆಗಳಲ್ಲಿ 403 ಪುಸ್ತಕಗಳನ್ನು ಇ-ಪಠ್ಯಕ್ಕೆ ಪರಿವರ್ತಿಸಿ ಅಪ್‌ಲೋಡ್ ಮಾಡಬೇಕಿದೆ. ನಾಲ್ಕು ವಾರಗಳ ಕಾಲಾವಕಾಶ ನೀಡಿದರೆ ಟೆಂಡರ್ ಅಂತಿಮಗೊಳಿಸಲಾಗುವುದು‘ ಎಂದು ವಿವರಿಸಿದರು.

ADVERTISEMENT

ಇದನ್ನು ದಾಖಲಿಸಿಕೊಂಡ ನ್ಯಾಯಪೀಠ ವಿಚಾರಣೆಯನ್ನು ಜೂನ್ ಮೊದಲ ವಾರಕ್ಕೆ ಮುಂದೂಡಿದೆ. ಅಂತೆಯೇ, ಸರ್ಕಾರ ಒದಗಿಸಿರುವ ಅಂಕಿ-ಅಂಶಗಳ ಸತ್ಯಾಸತ್ಯತೆ ಪರಿಶೀಲಿಸಿ ಲಿಖಿತ ಮಾಹಿತಿ ಸಲ್ಲಿಸಲು ಅರ್ಜಿದಾರರ ಪರ ವಕೀಲರಿಗೆ ಸೂಚಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.