ADVERTISEMENT

ಬೆತ್ತಲೆ, ಅಶ್ಲೀಲ ವೆಬ್‌ಸೈಟ್ ವೀಕ್ಷಣೆಗೆ ನಿರ್ಬಂಧ ಕೋರಿಕೆ: ಪಿಐಎಲ್ ವಿಲೇವಾರಿ

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2025, 15:49 IST
Last Updated 4 ನವೆಂಬರ್ 2025, 15:49 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು: ‘ಬೆತ್ತಲೆ, ಅಶ್ಲೀಲ ಚಿತ್ರಗಳನ್ನು ಬಿತ್ತರಿಸುವ ವೆಬ್‌ಸೈಟ್‌ ಹಾಗೂ ಅಪ್ಲಿಕೇಶನ್‌ಗಳನ್ನು ನಿಷೇಧಿಸಲು ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸಬೇಕು’ ಎಂದು ಕೋರಲಾಗಿದ್ದ ಅರ್ಜಿಯನ್ನು ಹೈಕೋರ್ಟ್‌ ವಿಲೇವಾರಿ ಮಾಡಿದೆ.

ಈ ಸಂಬಂಧ ‘ಲೀಗಲ್‌ ಅಟಾರ್ನೀಸ್‌' ಮತ್ತು 'ಬ್ಯಾರಿಸ್ಟರ್ಸ್‌ ಲಾ ಫರ್ಮ್‌’ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ನೇತೃತ್ವದ ವಿಭಾಗೀಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಕೇಂದ್ರ ಸರ್ಕಾರದ ಪರ ಹಾಜರಿದ್ದ ಡೆಪ್ಯುಟಿ ಸಾಲಿಸಿಟರ್‌ ಜನರಲ್‌ ಎಚ್‌. ಶಾಂತಿಭೂಷಣ್‌ ಅವರು, ‘ಇದೇ ವಿಚಾರಕ್ಕೆ ಸಂಬಂಧಿಸಿದ ಅರ್ಜಿ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆಗೆ ಬಾಕಿ ಇದೆ’ ಎಂಬ ಅಂಶವನ್ನು ನ್ಯಾಯಪೀಠದ ಗಮನಕ್ಕೆ ತಂದರು.

ADVERTISEMENT

ಇದನ್ನು ಪರಿಗಣಿಸಿದ ನ್ಯಾಯಪೀಠ ‘ಈ ಹಂತದಲ್ಲಿ ಈ ಅರ್ಜಿ ವಿಚಾರಣೆ ಸೂಕ್ತವಲ್ಲ. ಯಾವುದೇ ಆದೇಶದ ಅಗತ್ಯವೂ ಇಲ್ಲ’ ಎಂಬ ಅಭಿಪ್ರಾಯ ವ್ಯಕ್ತಪಡಿಸಿ ಅರ್ಜಿ ವಿಲೇವಾರಿ ಮಾಡಿ ಆದೇಶಿಸಿತು.

‘ಹದಿನೆಂಟು ವರ್ಷದ ಕೆಳಗಿನ ಮಕ್ಕಳ ಅಶ್ಲೀಲ ವಿಚಾರಗಳ ವೀಕ್ಷಣೆಗೆ ನಿರ್ಬಂಧ ವಿಧಿಸಬೇಕು’ ಎಂಬ ಕೋರಿಕೆಯೂ ಸೇರಿದಂತೆ ಹಲವು ಅಂಶಗಳ ಮನವಿ ಹೊಂದಿದ ಅರ್ಜಿಗಳು ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆಗೆ ಬಾಕಿ ಇವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.