ADVERTISEMENT

ಕೌಟುಂಬಿಕ ಕಿರುಕುಳ ಪ್ರಕರಣ: ‘ಅನ್ನ–ಬಟ್ಟೆ ನೀಡದಿರುವುದು ಅಪರಾಧವಲ್ಲ’

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2019, 20:01 IST
Last Updated 5 ಮಾರ್ಚ್ 2019, 20:01 IST
   

ಬೆಂಗಳೂರು: ‘ಕೌಟುಂಬಿಕ ಕಿರುಕುಳ ಪ್ರಕರಣದಲ್ಲಿ ಸಂತ್ರಸ್ತ ಮಹಿಳೆಗೆ ಅನ್ನ, ಬಟ್ಟೆ ಕೊಟ್ಟಿಲ್ಲ ಎಂಬ ಆರೋಪವು ಕ್ರಿಮಿನಲ್‌ ಅಪರಾಧ ವ್ಯಾಪ್ತಿಗೆ ಬರುವುದಿಲ್ಲ’ ಎಂದು ಹೈಕೋರ್ಟ್‌ ಅಭಿಪ್ರಾಯಪಟ್ಟಿದೆ.

ಮೈಸೂರು ನಿವಾಸಿಯೊಬ್ಬರ ಕೌಟುಂಬಿಕ ಕಿರುಕುಳ ಪ್ರಕರಣವೊಂದರಲ್ಲಿ ಅರ್ಜಿದಾರರ ವಿರುದ್ಧದ ದೋಷಾರೋಪ ಪಟ್ಟಿ ರದ್ದುಪಡಿಸಿದ ನ್ಯಾಯಮೂರ್ತಿ ಜಾನ್‌ ಮೈಕೆಲ್‌ ಕುನ್ಹ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ನಿಲುವು ವ್ಯಕ್ತಪಡಿಸಿದೆ.

ಪತಿಯ ನಿರ್ಲಕ್ಷ್ಯಕ್ಕೆ ಬೇಸತ್ತು ಗೃಹಿಣಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಪ್ರಕರಣದಲ್ಲಿ ಪತಿ ಹಾಗೂ ಆತನ ಕುಟುಂಬ ಸದಸ್ಯರ ವಿರುದ್ಧ, ನರಸಿಂಹ ರಾಜ ಠಾಣೆ ಪೊಲೀಸರು ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ಕ್ರಿಮಿನಲ್‌ ಪ್ರಕರಣ ದಾಖಲಿಸಿದ್ದರು.

ADVERTISEMENT

ತನಿಖೆ ನಡೆಸಿದ್ದ ಪೊಲೀಸರು ಆತ್ಮಹತ್ಯೆ ಮಾಡಿಕೊಂಡ ಗೃಹಿಣಿಯ ಪತಿ, ಆತನ ತಾಯಿ ಹಾಗೂ ಸಹೋದರನ ವಿರುದ್ಧ ಭಾರತೀಯ ದಂಡ ಸಂಹಿತೆಯ ಕಲಂ 498 (ಎ) (ವಿವಾಹಿತ ಮಹಿಳೆಯ ಮೇಲೆ ಪತಿ ಅಥವಾ ಪತಿಯ ಕುಟುಂಬದವರಿಂದ ಜರುಗುವ ಕ್ರೌರ್ಯ), ಕಲಂ 306 (ಆತ್ಮಹತ್ಯೆಗೆ ಪ್ರಚೋದನೆ ನೀಡಿದ) ಹಾಗೂ ಕಲಂ 34ರ (ಸಮಾನ ಉದ್ದೇಶ) ಅಡಿಯಲ್ಲಿ ವಿಚಾರಣಾ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ಈ ದೋಷಾರೋಪ ಪಟ್ಟಿ ರದ್ದುಪಡಿಸುವಂತೆ ಕೋರಿ ಪ್ರಕರಣದ ಎರಡನೇ ಆರೋಪಿಯಾದ ಮೃತಳ ಅತ್ತೆ ಹಾಗೂ ಮೂರನೇ ಆರೋಪಿಯಾಗಿದ್ದ ಮೈದುನ ಹೈಕೋರ್ಟ್‌ ಮೆಟ್ಟಿಲೇರಿದ್ದರು.

ವಿಚಾರಣೆ ನಡೆಸಿದ ನ್ಯಾಯಪೀಠ, ‘ಆರೋಪಿಗಳು ಮೃತ ಮಹಿಳೆಯ ಜೊತೆ ಅನುಚಿತವಾಗಿ ನಡೆದುಕೊಂಡಿದ್ದರು ಹಾಗೂ ಅನ್ನ-ಬಟ್ಟೆ ನೀಡದೆ ಕಿರುಕುಳ ನೀಡಿದ್ದರು ಎಂಬುದು ಸುಳ್ಳು. ಇದು ನಂಬಲರ್ಹವೂ ಅಲ್ಲ ಎಂಬುದು ವಿಚಾರಣೆ ವೇಳೆ ಮನದಟ್ಟಾಗಿದೆ’ ಎಂದು ಹೇಳಿದೆ.

‘ಆರೋಪಿಗಳಿಗೆ ಅಪರಾಧಿಕ ಮನೋಭಾವ ಇರಬೇಕು. ಇಲ್ಲದೇ ಹೋದರೆ, ಅನ್ನ, ವಸತಿ ಕೊಟ್ಟಿಲ್ಲ ಎಂಬ ಏಕೈಕ ಆರೋಪವು ಕೌಟುಂಬಿಕ ಕಿರುಕುಳದ ಪ್ರಕರಣದಲ್ಲಿ ಕ್ರಿಮಿನಲ್‌ ಅಪರಾಧ ವ್ಯಾಪ್ತಿಗೆ ಒಳಪಡುವುದಿಲ್ಲ’ ಎಂದೂ ನ್ಯಾಯಪೀಠ ವಿವರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.