ADVERTISEMENT

ಕಾನೂನು ದುರ್ಬಳಕೆ: ಅರ್ಜಿದಾರರಿಗೆ ₹10 ಲಕ್ಷ ದಂಡ ವಿಧಿಸಿದ ಹೈಕೋರ್ಟ್

​ಪ್ರಜಾವಾಣಿ ವಾರ್ತೆ
Published 27 ಜುಲೈ 2025, 0:18 IST
Last Updated 27 ಜುಲೈ 2025, 0:18 IST
<div class="paragraphs"><p>ಹೈಕೋರ್ಟ್</p></div>

ಹೈಕೋರ್ಟ್

   

ಬೆಂಗಳೂರು: ಭೂ ಸ್ವಾಧೀನಕ್ಕೆ ಒಳಗಾದ ಜಮೀನಿಗೆ ಪರಿಹಾರ ಪಡೆದ ಬಳಿಕವೂ ಸ್ವಾಧೀನ ಪ್ರಕ್ರಿಯೆ ಪ್ರಶ್ನಿಸಲಾದ ಅರ್ಜಿಗಳು ಏಳು ಬಾರಿ ವಜಾಗೊಂಡಿದ್ದರೂ ಆ ಮಾಹಿತಿಯನ್ನು ಮರೆಮಾಚಿ ಎಂಟನೇ ಬಾರಿಗೆ ಪುನಃ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದ ಕುಟುಂಬವೊಂದರ ನಡೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಹೈಕೋರ್ಟ್​, ಇದೊಂದು ನ್ಯಾಯಾಂಗ ಪ್ರಕ್ರಿಯೆಯ ದುರುಪಯೋಗ ಎಂಬ ಅಭಿಪ್ರಾಯದೊಂದಿಗೆ ₹10 ಲಕ್ಷ ದಂಡ ವಿಧಿಸಿ ತೀರ್ಪು ನೀಡಿದೆ.

ಬೆಂಗಳೂರಿನ ದೊಡ್ಡಬಸ್ತಿ ಮುಖ್ಯ ರಸ್ತೆಯ ಭುವನೇಶ್ವರಿ ನಗರ ನಿವಾಸಿಗಳಾದ ಗಂಗಮ್ಮ ಮತ್ತು ಕುಟುಂಬಸ್ಥರು ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿರುವ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಕುರಿತಂತೆ ತೀರ್ಪು ನೀಡಿದೆ.

ADVERTISEMENT

ತೀರ್ಪು ಪ್ರಕಟವಾದ ನಾಲ್ಕು ವಾರಗಳಲ್ಲಿ ₹10 ಲಕ್ಷ ದಂಡದ ಮೊತ್ತವನ್ನು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಪಾವತಿಸಲು ನ್ಯಾಯಪೀಠ ನಿರ್ದೇಶಿಸಿದೆ.

‘ಅರ್ಜಿದಾರರು ತಪ್ಪಿತಸ್ಥರಾಗಿದ್ದಾರೆ. ಶುದ್ಧಹಸ್ತದಿಂದ ನ್ಯಾಯಾಲಯಕ್ಕೆ ಬಂದಿಲ್ಲ. ವಂಚನೆ, ತಪ್ಪು ಮಾಹಿತಿ ನೀಡಿ ನ್ಯಾಯಾಂಗ ಪ್ರಕ್ರಿಯೆಯ ಪಾವಿತ್ರ್ಯ ಕಳಂಕಗೊಳಿಸಿದ್ದಾರೆ. ಇದರಿಂದ ನ್ಯಾಯದ ಘನತೆಗೆ ಅವಮಾನ ಮಾಡಿದಂತಾಗಿದೆ’ ಎಂದು ಕಠಿಣ ಶಬ್ದಗಳಲ್ಲಿ ಅರ್ಜಿದಾರರ ನಡೆಯನ್ನು ನ್ಯಾಯಪೀಠ ಖಂಡಿಸಿದೆ.

‘ಪ್ರಕರಣಕ್ಕೆ ಸಂಬಂಧಿಸಿದಂತೆ ಮೊದಲ ಅರ್ಜಿ 1994ರಲ್ಲಿ ಸಲ್ಲಿಕೆಯಾಗಿದೆ. ಈವರೆಗೂ ಅರ್ಜಿದಾರರು ಎಂಟು ಬಾರಿ ಕಾನೂನು ಹೋರಾಟ ನಡೆಸಿದ್ದಾರೆ. ಎಲ್ಲ ಅರ್ಜಿಗಳು ವಜಾಗೊಂಡಿವೆ. ಆದರೆ, ಈ ಅಂಶವನ್ನು ಕೊನೆಯ ಅರ್ಜಿಯಲ್ಲಿ ಮರೆ ಮಾಚಲಾಗಿದೆ’ ಎಂದು ನ್ಯಾಯಪೀಠ ಕಿಡಿ ಕಾರಿದೆ.

ಪ್ರಕರಣವೇನು?: ವೆಂಕಟೇಶ್​ ಭೋವಿ ಮತ್ತು ಹನುಮಂತ ಭೋವಿ ಎಂಬುವರು ಕೆಂಗೇರಿ ಹೋಬಳಿಯ ನಾಗದೇವನ ಹಳ್ಳಿಯ ಸರ್ವೇ ಸಂಖ್ಯೆ 26ರ ಜಮೀನನ್ನು ಅನಧಿಕೃತವಾಗಿ ಬಳಕೆ ಮಾಡುತ್ತಿದ್ದರು. ನಂತರ ಸಾಗುವಳಿ ಅಡಿಯಲ್ಲಿ ಜಮೀನನ್ನು ಅರ್ಜಿದಾರರ ಹೆಸರಿಗೆ ಮಂಜೂರು ಮಾಡಲಾಗಿತ್ತು. ಈ ಜಮೀನು ಇಬ್ಬರ ಹೆಸರಿಗೆ ಬದಲಾವಣೆಗೊಂಡಿದ್ದವು. ಉದ್ದೇಶಿತ ಜಮೀನನ್ನು ಗವಿಪುರಂ ಎಕ್ಸ್ಟೆನ್ಷನ್ ಹೌಸ್​ ಬಿಲ್ಡಿಂಗ್​ ಕೋ-ಆಪರೇಟಿವ್​ ಸೊಸೈಟಿಯಿಂದ ಬಡಾವಣೆ ನಿರ್ಮಾಣಕ್ಕಾಗಿ 1986ರಲ್ಲಿ ಪ್ರಾಥಮಿಕ ಮತ್ತು 1987ರಲ್ಲಿ ಅಂತಿಮ ಅಧಿಸೂಚನೆ ಹೊರಡಿಸಲಾಗಿತ್ತು.

ಇದರನ್ವಯ ಪ್ರತಿ ಎಕರೆಗೆ ₹65 ಸಾವಿರ ಮತ್ತು ₹15 ಸಾವಿರದಂತೆ ಬಡ್ಡಿ ಸೇರಿಸಿ ಪರಿಹಾರ ನೀಡಲಾಗಿತ್ತು. ಈ ಪರಿಹಾರ ಮೊತ್ತವನ್ನು 1987ರಲ್ಲಿ ಜಮೀನಿನ ಮಾಲೀಕರ ಖಾತೆಗಳಿಗೆ ಜಮಾ ಮಾಡಲಾಗಿತ್ತು. ಏತನ್ಮಧ್ಯೆ, ವೆಂಕಟೇಶ್​ ಭೋವಿ ಮತ್ತು ಹನುಮಂತ ಭೋವಿ ಮೃತಪಟ್ಟಿದ್ದರು. ಬಳಿಕ ಜಮೀನನ್ನು ಭೂ ಸ್ವಾಧೀನದಿಂದ ಕೈಬಿಡಬೇಕು ಎಂದು ಕೋರಿ ಅವರಿಬ್ಬರ ವಾರಸುದಾರರು ನಡೆಸಿದ ಕಾನೂನು ಹೋರಾಟದ ಭಾಗವಾಗಿ ಈ ಅರ್ಜಿ ಸಲ್ಲಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.