ADVERTISEMENT

ಲಿಂಗ ಪರಿವರ್ತನೆ ಆರೋಪ: ವೈದ್ಯೆಗೆ ನಿರೀಕ್ಷಣಾ ಜಾಮೀನು

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2019, 20:18 IST
Last Updated 23 ಫೆಬ್ರುವರಿ 2019, 20:18 IST
   

ಬೆಂಗಳೂರು: ಬಾಲಕನೊಬ್ಬನಿಗೆ ಬಲವಂತವಾಗಿ ಲಿಂಗ ಪರಿವರ್ತನೆ ಮಾಡಿದ ಆರೋಪ ಎದುರಿಸುತ್ತಿದ್ದ ವೈದ್ಯರಿಗೆ ಹೈಕೋರ್ಟ್‌ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.

ಈ ಕುರಿತಂತೆ ನಗರದ ಕಾಚರಕನಹಳ್ಳಿಯ ಡಾ.ಅನಿತಾ ಪಾಟೀಲ ಅವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಬಿ.ಎ.ಪಾಟೀಲ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಾನ್ಯ ಮಾಡಿದೆ.

‘ಅರ್ಜಿದಾರರು ₹ 2 ಲಕ್ಷ ಮೊತ್ತದ ಬಾಂಡ್, ಇಷ್ಟೇ ಮೊತ್ತಕ್ಕೆ ಇಬ್ಬರ ಜಾಮೀನು, ಕೋರ್ಟ್‌ ಅನುಮತಿ ಇಲ್ಲದೆ ವಿಚಾರಣಾ ನ್ಯಾಯಾಲಯದ ವ್ಯಾಪ್ತಿ ಪ್ರದೇಶ ಬಿಟ್ಟು ಹೋಗುವಂತಿಲ್ಲ, ಭವಿಷ್ಯದಲ್ಲಿ ಇಂತಹ ಅಪರಾಧಿಕ ಕೃತ್ಯ ನಡೆಸಬಾರದು’ ಎಂಬ ಷರತ್ತು ವಿಧಿಸಲಾಗಿದೆ.

ADVERTISEMENT

ವಿಚಾರಣೆ ವೇಳೆ ಪ್ರಾಸಿಕ್ಯೂಷನ್‌ ಪರ ವಕೀಲರು, ‘ವೈದ್ಯರಿಗೆ ನಿರೀಕ್ಷಣಾ ಜಾಮೀನು ನೀಡಬಾರದು. ಲಿಂಗ ಪರಿವರ್ತನೆ ನಂತರ ಬಾಲಕ ಎಚ್‌ಐವಿ ಪೀಡಿತನಾಗಿದ್ದಾನೆ’ ಎಂದು ಆಕ್ಷೇಪಿಸಿದ್ದರು.

ಆದರೆ, ಇದನ್ನು ಮಾನ್ಯ ಮಾಡದ ನ್ಯಾಯಪೀಠ, ‘ಬಾಲಕ ಸ್ವಇಚ್ಛೆಯಿಂದ ಲಿಂಗ ಪರಿವರ್ತನೆ ಮಾಡಿಸಿಕೊಂಡಿದ್ದಾನೆ ಎಂಬ ವೈದ್ಯರ ಪರ ವಕೀಲರ ಹೇಳಿಕೆ ಸಮರ್ಥನೀಯವಾಗಿದೆ. ಅಂತೆಯೇ ಈಗಾಗಲೇ ವಿಚಾರಣಾ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಕೆಯಾಗಿರುವ ಕಾರಣ ಕಠಿಣ ಷರತ್ತುಗಳೊಂದಿಗೆ ನಿರೀಕ್ಷಣಾ ಜಾಮೀನು ನೀಡಬಹುದಾಗಿದೆ’ ಎಂದು ಅಭಿಪ್ರಾಯಪಟ್ಟಿದೆ.

ಪ್ರಕರಣವೇನು?: ‘ಬೆಂಗಳೂರಿನ ಪಾಲಿಕೆ ಶಾಲೆಯಲ್ಲಿ 10ನೇ ತರಗತಿ ಓದುತ್ತಿರುವ ನನ್ನ ಮೊಮ್ಮಗ ನಾಪತ್ತೆಯಾಗಿದ್ದಾನೆ ಎಂದು ಆರೋಪಿಸಿ’ ಮಹಿಳೆಯೊಬ್ಬರು ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ಪಟ್ಟಣ ಪೊಲೀಸ್‌ ಠಾಣೆಯಲ್ಲಿ ಬಾಲಕನ ಅಜ್ಜಿ ದೂರು ದಾಖಲಿಸಿದ್ದರು.

ಕೆಲ ದಿನಗಳ ಬಳಿಕ ನಾಪತ್ತೆಯಾಗಿರುವ ಬಾಲಕ ಲಿಂಗ ಪರಿವರ್ತನೆಗೆ ಒಳಗಾಗಿದ್ದಾನೆ ಎಂಬ ವಿಷಯ ಲಿಂಗ ಪರಿವರ್ತಿತರೊಬ್ಬರಿಂದ ಮನೆಯವರಿಗೆ ತಿಳಿದು ಬಂತು. ಈ ಕುರಿತಂತೆ ‍ಪೊಲೀಸರು ಮತ್ತೊಂದು ಪ್ರಕರಣ ದಾಖಲಿಸಿದರು. ಡಾ. ಅನಿತಾ ಲಿಂಗ ಪರಿವರ್ತನೆ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ ಎಂದು ಅವರ ವಿರುದ್ಧ ಪೊಕ್ಸೊ ಕಾಯ್ದೆ ಸೇರಿದಂತೆ ಮಾನವ ಕಳ್ಳಸಾಗಣೆ ಮಾಡಿದ ಮತ್ತು ಬಾಲಕನ ಲಿಂಗ ಪರಿವರ್ತನೆ ಮಾಡಿದ ಆರೋಪದಡಿ ಪ್ರಕರಣ ದಾಖಲಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.