ADVERTISEMENT

ಪೂರ್ವಾನುಮತಿ ಕೋರಿಕೆ ಪರಿಗಣಿಸಲು ನಿರ್ದೇಶನ

ಐ ಮಾನಿಟರಿ ಅಡ್ವೈಸರಿ ಕಂಪನಿಯ ಬಹುಕೋಟಿ ವಂಚನೆ ಪ್ರಕರಣ

​ಪ್ರಜಾವಾಣಿ ವಾರ್ತೆ
Published 22 ಜನವರಿ 2020, 21:52 IST
Last Updated 22 ಜನವರಿ 2020, 21:52 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು: ‘ಐ ಮಾನಿಟರಿ ಅಡ್ವೈಸರಿ (ಐಎಂಎ) ಕಂಪನಿಯ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ಕು ಜನ ಪೊಲೀಸ್‌ ಅಧಿಕಾರಿಗಳ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಕೆಗೆ ಸಿಬಿಐ ಕೋರಿರುವ ಪೂರ್ವಾನುಮತಿಯನ್ನು ತಕ್ಷಣವೇ ಪರಿಗಣಿಸಬೇಕು’ ಎಂದು ಹೈಕೋರ್ಟ್‌, ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ.

ಐಎಂಎ ವಂಚನೆ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಕೋರಿ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ಅಭಯ್‌ ಎಸ್.ಓಕಾ ನೇತೃತ್ವದ ವಿಭಾಗೀಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಸಿಬಿಐ ಪರ ವಕೀಲ ಪಿ.ಪ್ರಸನ್ನಕುಮಾರ್, ‘ಪೂರ್ವಾನುಮತಿ ಕೋರಿ 2019ರ ಡಿಸೆಂಬರ್ 18ರಂದು ಸಲ್ಲಿಸಿರುವ ಮನವಿಯನ್ನು ಸರ್ಕಾರ ಪರಿಗಣಿಸಿಲ್ಲ’ ಎಂದು ಆಕ್ಷೇಪಿಸಿದರು.

ADVERTISEMENT

ಅಂತೆಯೇ, ‘ತನಿಖೆಯ ನೇತೃತ್ವ ವಹಿಸಿರುವ ಸಿಬಿಐ ಹೈದರಾಬಾದ್ ಘಟಕದ ಜಂಟಿ ನಿರ್ದೇಶಕ ಎ.ವೈ.ವಿ ಕೃಷ್ಣ ಅವರನ್ನು ತನಿಖಾಧಿಕಾರಿ ಸ್ಥಾನದಲ್ಲಿ ಮುಂದುವರಿಸಲಾಗಿದೆ. ಅವರನ್ನು ಹುದ್ದೆಯಿಂದ ಬಿಡುಗಡೆ ಮಾಡಿಲ್ಲ’ ಎಂದು ನ್ಯಾಯಪೀಠದ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಅರ್ಜಿದಾರರ ಪರ ವಕೀಲರು, ‘ಬೆಂಗಳೂರು ನಗರ ಜಿಲ್ಲೆಯ ಪ್ರಧಾನ ನ್ಯಾಯಾಧೀಶರ ವಿಶೇಷ ಕೋರ್ಟ್‌ ಐಎಂಎ ಪ್ರಕರಣದ ಜೊತೆಗೇ, ಬಿಯುಡಿಎಸ್‌ (ಅನಿಯಂತ್ರಿತ ಹೂಡಿಕೆ ಸ್ಕೀಂಗಳ ನಿಷೇಧ) ಮತ್ತು ಕರ್ನಾಟಕ ಹಣಕಾಸು ಸಂಸ್ಥೆಗಳಲ್ಲಿ ಹೂಡಿಕೆದಾರರ ಹಿತರಕ್ಷಣಾ (ಕೆಪಿಐಡಿ) ಕಾಯ್ದೆ ಅಡಿಯಲ್ಲಿನ ನೂರಾರು ಪ್ರಕರಣಗಳನ್ನು ವಿಚಾರಣೆ ನಡೆಸುತ್ತಿದೆ. ಆಡಳಿತಾತ್ಮಕ ಹೊರೆಯೂ ಹೆಚ್ಚಿದೆ’ ಎಂಬ ಅಂಶವನ್ನು ನ್ಯಾಯಪೀಠದ ಗಮನಕ್ಕೆ ತಂದರು.

ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ನ್ಯಾಯಪೀಠ, ‘ಈ ಅಂಶದತ್ತ ಗಮನ ಹರಿಸಿ’ ಎಂದು ಹೈಕೋರ್ಟ್‌ ರಿಜಿಸ್ಟ್ರಾರ್ ಜನರಲ್‌ ಅವರಿಗೆ ನಿರ್ದೇಶಿಸಿದೆ. ತನಿಖೆಯ ಪ್ರಗತಿ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ಫೆಬ್ರುವರಿ 28ರೊಳಗೆ ಸಲ್ಲಿಸುವಂತೆ ಸಿಬಿಐಗೆ ಸೂಚಿಸಿ ವಿಚಾರಣೆಯನ್ನು ಮಾರ್ಚ್‌ 5ಕ್ಕೆ ಮುಂದೂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.