ADVERTISEMENT

ಅಕ್ರಮ ಧಾರ್ಮಿಕ ಕಟ್ಟಡ: ಹೊಸ ಪ್ರಮಾಣ ಪತ್ರ ಸಲ್ಲಿಸಲು ಸೂಚನೆ

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2021, 19:30 IST
Last Updated 12 ಆಗಸ್ಟ್ 2021, 19:30 IST
ಹೈಕೋರ್ಟ್
ಹೈಕೋರ್ಟ್   

ಬೆಂಗಳೂರು: ಸರ್ಕಾರಿ ಜಾಗದಲ್ಲಿ ನಿರ್ಮಿಸಿರುವ ಅಕ್ರಮ ಧಾರ್ಮಿಕ ಕಟ್ಟಡಗಳನ್ನು ತೆರವುಗೊಳಿಸುವ ಸಂಬಂಧ ಸರಿಯಾದ ಪ್ರಮಾಣ ಪತ್ರ ಸಲ್ಲಿಸುವಂತೆ ಬಿಬಿಎಂಪಿಗೆ ಹೈಕೋರ್ಟ್ ನಿರ್ದೇಶನ ನೀಡಿದೆ.

‘ಸುಪ್ರೀಂ ಕೋರ್ಟ್‌ ಆದೇಶ ಜಾರಿಗೆ ತರಲು ಪಾಲಿಕೆ ತಗೆದುಕೊಂಡಿರುವ ಕ್ರಮಗಳು ಆಘಾತಕಾರಿ ಸ್ಥಿತಿಯನ್ನು ಬಹಿರಂಗಪಡಿಸುತ್ತವೆ’ ಎಂದು ಮುಖ್ಯ ನ್ಯಾಯಮುರ್ತಿ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠ ಅಸಮಾಧಾನ ವ್ಯಕ್ತಪಡಿಸಿತು.

2009ರ ಸೆಪ್ಟೆಂಬರ್ 29ರ ಬಳಿಕ 277 ಅಕ್ರಮ ಧಾರ್ಮಿಕ ಕಟ್ಟಡಗಳು ನಿರ್ಮಾಣವಾಗಿವೆ ಎಂಬ ವರದಿಯನ್ನು ಪೀಠ ಪರಿಶೀಲಿಸಿತು. ಅಕ್ರಮ ಕಟ್ಟಡಗಳ ತೆರವು ವಿಷಯದಲ್ಲಿ ಯಾವುದೇ ಬಾಹ್ಯ ಒತ್ತಡಗಳು ಇರಕೂಡದು ಎಂದು ತಿಳಿಸಿತು.

ADVERTISEMENT

‘1,893 ಅನಧಿಕೃತ ಕಟ್ಟಡಗಳಿದ್ದು, ಅವುಗಳಲ್ಲಿ 1,548 ಕಟ್ಟಡಗಳನ್ನು ಕ್ರಮಬದ್ಧಗೊಳಿಸಬಹುದು. 105 ಕಟ್ಟಡಗಳನ್ನು ಸ್ಥಳಾಂತರಿಸಬಹುದು ಮತ್ತು 240 ಕಟ್ಟಡಗಳನ್ನು ತೆರವುಗೊಳಿಸಲಾಗುವುದು’ ಎಂದು ಈ ಹಿಂದಿನ ಪ್ರಮಾಣ ಪತ್ರದಲ್ಲಿ ಬಿಬಿಎಂಪಿ ವಿವರಿಸಿತ್ತು. 277 ಕಟ್ಟಡಗಳನ್ನು ಗುರುತಿಸಲಾಗಿದೆ ಎಂದು ಗುರುವಾರ ಸಲ್ಲಿಸಿದ ಪ್ರಮಾಣ ಪತ್ರದಲ್ಲಿ ಪಾಲಿಕೆ ತಿಳಿಸಿತು.

ಕಟ್ಟಡಗಳ ತೆರವಿಗೆ ಕಾಲಮಿತಿ ನಿಗದಿ ಮಾಡಿಕೊಂಡು ಮೂರು ವಾರಗಳಲ್ಲಿ ಹೊಸದಾಗಿ ಪ್ರಮಾಣ ಪತ್ರ ಸಲ್ಲಿಸಬೇಕು ಎಂದು ಮುಖ್ಯ ಆಯುಕ್ತರಿಗೆ ಆದೇಶಿಸಿದ ಪೀಠ, ವಿಚಾರಣೆಯನ್ನು ಸೆ.17ಕ್ಕೆ ಮುಂದೂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.