ADVERTISEMENT

ಜೈಲಿಗೆ ಹೈಕೋರ್ಟ್‌ ನ್ಯಾ. ದಿಢೀರ್ ಭೇಟಿ:‘ಎಲ್ಲವೂ ಸ್ವಚ್ಛವಾಗಿದೆ–ಸಂತೃಪ್ತವಾಗಿದೆ’

​ಪ್ರಜಾವಾಣಿ ವಾರ್ತೆ
Published 29 ಜನವರಿ 2022, 19:46 IST
Last Updated 29 ಜನವರಿ 2022, 19:46 IST
ಜೈಲಿನ ಊಟದ ಗುಣಮಟ್ಟ ಪರಿಶೀಲಿಸಿದ ನ್ಯಾಯಮೂರ್ತಿ ಬಿ.ವೀರಪ್ಪ
ಜೈಲಿನ ಊಟದ ಗುಣಮಟ್ಟ ಪರಿಶೀಲಿಸಿದ ನ್ಯಾಯಮೂರ್ತಿ ಬಿ.ವೀರಪ್ಪ   

ಬೆಂಗಳೂರು: ‘ಪರಪ್ಪನ ಅಗ್ರಹಾರಕೇಂದ್ರಿಯ ಕಾರಾಗೃಹದಲ್ಲಿ ರೌಡಿ ಶೀಟರ್‌ ಕೈದಿಗಳಿಗೆ ರಾಜಾತಿಥ್ಯ ನೀಡಲಾಗುತ್ತಿದೆ’ ಎಂಬ ಮಾಧ್ಯಮ ವರದಿಗಳ ಹಿನ್ನೆಲೆಯಲ್ಲಿ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯ ನಿರ್ವಾಹಕ ಅಧ್ಯಕ್ಷರೂ ಆದ ಹೈಕೋರ್ಟ್‌ ನ್ಯಾಯಮೂರ್ತಿ ಬಿ.ವೀರಪ್ಪ ಹಾಗೂ ನ್ಯಾಯಮೂರ್ತಿ ಪಿ.ಎಸ್‌. ದಿನೇಶ್ ಕುಮಾರ್ ಅವರು ಶನಿವಾರ ಜೈಲಿಗೆ ದಿಢೀರ್‌ ಭೇಟಿ ನೀಡಿ ಪರಿಶೀಲಿಸಿದರು.

ರಿಜಿಸ್ಟ್ರಾರ್ ಜನರಲ್‌ ಶಿವಶಂಕರೇಗೌಡ, ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸುದರ್ಶನ ಶೆಟ್ಟಿ ಅವರೊಂದಿಗೆ,ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೂಜೈಲಿನ ಎಲ್ಲೆಡೆ ಸುತ್ತಾಟ ನಡೆಸಿದರು. ಬ್ಯಾರಕ್‌ಗಳು, ಸೆಲ್‌ಗಳು, ಅಡುಗೆ ಮನೆ, ಚಿಕಿತ್ಸಾ ಕೇಂದ್ರಗಳೂ ಸೇರಿದಂತೆ ಮಹಿಳಾ ಕೈದಿಗಳಿದ್ದ ಸ್ಥಳಗಳನ್ನು ಕೂಲಂಕಷವಾಗಿ ಪರಿಶೀಲಿಸಿದರು.

ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ನ್ಯಾಯಮೂರ್ತಿ ಬಿ.ವೀರಪ್ಪ, ‘ಕೈದಿಗಳ ಐಷಾರಾಮಿ ಜೀವನಕ್ಕೆಜೈಲುಸಿಬ್ಬಂದಿಯೇ ಅನುವು ಮಾಡಿಕೊಟ್ಟಿದ್ದಾರೆ ಎಂಬ ವಿಡಿಯೊಗಳು ಮಾಧ್ಯಮಗಳಲ್ಲಿ ಬಿತ್ತರಗೊಂಡಿದ್ದವು. ಈ ಹಿನ್ನೆಲೆಯಲ್ಲಿ ದಿಢೀರ್‌ ಭೇಟಿ ನೀಡಿ ಪರಿಶೀಲಿಸಿದೆವು. ಆದರೆ, ಅಂತಹುದ್ದೇನೂ ಕಂಡು ಬರಲಿಲ್ಲ. ಎಲ್ಲವೂ ಸ್ವಚ್ಛವಾಗಿತ್ತು’ ಎಂದು ವಿವರಿಸಿದರು.

ADVERTISEMENT

‘ಕೈದಿಗಳ ಕಷ್ಟ ಸುಖ ವಿಚಾರಿಸಿದೆವು. ಯಾವುದೇ ಆಕ್ಷೇಪಣೆ ಕೇಳಿ ಬರಲಿಲ್ಲ. ಅಂತೆಯೇ ಮೇಲ್ನೋಟಕ್ಕೆ ಅಲ್ಲಿ ನಮಗೆ ಯಾವುದೇ ರೀತಿಯ ವ್ಯತ್ಯಾಸಗಳೂ ಕಂಡು ಬರಲಿಲ್ಲ’ ಎಂದು ಅವರು ಹೇಳಿದರು.

ನೆರವು: ‘ಯಾವ ಕೈದಿಗಳಿಗೆ ವಕೀಲರನ್ನು ನೇಮಿಸಿಕೊಂಡು ತಮ್ಮ ಪ್ರಕರಣಗಳನ್ನು ಕೋರ್ಟ್‌ನಲ್ಲಿ ನಡೆಸಲು ಸಾಧ್ಯವಿಲ್ಲವೊ ಅಂತಹವರಿಗೆ ವಿಚಾರಣಾ ಕೋರ್ಟ್‌ನಿಂದ ಸುಪ್ರೀಂ ಕೋರ್ಟ್‌ವರೆಗೂ ವಕೀಲರನ್ನು ನೇಮಕ ಮಾಡಿಕೊಳ್ಳಲು ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ನೆರವು ನೀಡಲಾಗುವುದು’ ಎಂದು ಕೈದಿಗಳಿಗೆ ತಿಳಿಸಿದ್ದಾಗಿ ವೀರಪ್ಪ ವಿವರಿಸಿದರು.

‘ಕೃಷ್ಣ ಜೈಲಿನಲ್ಲಿ ಹುಟ್ಟಿದ್ದು. ಇಂತಹ ಸ್ಥಳದಲ್ಲಿರುವ ನೀವು ನಿಮ್ಮ ಕಷ್ಟದ ದಿನಗಳನ್ನು ಮುಗಿಸಿ ಹೊರಬನ್ನಿ. ಹೊರಜಗತ್ತಿನಲ್ಲಿ ನಿಮಗೂ ಅವಕಾಶ ಇದೆ. ನಿಮ್ಮ ಹಕ್ಕುಗಳನ್ನು ಪಡೆದುಕೊಳ್ಳಿ’ ಎಂದು ಕೈದಿಗಳನ್ನು ಹುರಿದುಂಬಿಸಿದ್ದಾಗಿ ಹೇಳಿದರು.

‘ಕೈದಿಗಳಲ್ಲಿಯಾರೆಲ್ಲಾ 7–8 ವರ್ಷಗಳನ್ನು ಶಿಕ್ಷೆ ಪೂರೈಸಿದ್ದಾರೊ, ಅಂತಹವರ ಬಿಡುಗಡೆಗೆ ಆದ್ಯತಾ ಅನುಸಾರ ಕಾನೂನು ಪ್ರಕ್ರಿಯೆ ಕೈಗೊಳ್ಳಲಾಗುವುದು. ಈ ಕುರಿತ ಪಟ್ಟಿ ಸಿದ್ಧಪಡಿಸಿ ಕೊಡುವಂತೆ ಸೂಚಿಸಲಾಗಿದೆ’ ಎಂದರು.

‘ತಪ್ಪು ಕಂಡು ಬಂದಲ್ಲಿ ತಕ್ಕ ಶಾಸ್ತಿ’

ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳು ರಾಜಾತಿಥ್ಯ ಪಡೆಯುವವಿಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿವೆಯಲ್ಲಾ ಎಂಬ ಪತ್ರಕರ್ತರ ಪ್ರಶ್ನೆಗೆ ವೀರಪ್ಪ, ‘ಯಾವುದೇ ತಪ್ಪು ಕಂಡು ಬಂದಲ್ಲಿ ತಕ್ಕ ಶಾಸ್ತಿ ಮಾಡಲಾಗುವುದು’ ಎಂದು ಎಚ್ಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.