ADVERTISEMENT

ಕಬೀರ್ ಬೇಡಿ ಆತ್ಮಕಥೆ ನಿರ್ಬಂಧ ಕೋರಿಕೆ ವಜಾ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2024, 18:11 IST
Last Updated 7 ಫೆಬ್ರುವರಿ 2024, 18:11 IST
<div class="paragraphs"><p>ಹೈಕೋರ್ಟ್ </p></div>

ಹೈಕೋರ್ಟ್

   

ಬೆಂಗಳೂರು: ‘ನಟ ಕಬೀರ್ ಬೇಡಿಯ ಆತ್ಮಕಥನದಲ್ಲಿ ನನ್ನ ವಿರುದ್ಧ ಅವಹೇಳನಕಾರಿ ಹೇಳಿಕೆಗಳಿದ್ದು, ಕೃತಿಯ ಪ್ರಕಟಣೆ ಮತ್ತು ಮಾರಾಟಕ್ಕೆ ನಿರ್ಬಂಧ ವಿಧಿಸಬೇಕು’ ಎಂದು ಕೋರಿ, ಕಬೀರ್ ಬೇಡಿಯ ಅಣ್ಣ ರಂಗ ತ್ರಿಲೋಚನ ಬೇಡಿ ಸಲ್ಲಿಸಿದ್ದ ಮೇಲ್ಮನವಿಯನ್ನು ಹೈಕೋರ್ಟ್ ವಜಾಗೊಳಿಸಿದೆ.

ಕಬೀರ್ ಬೇಡಿ ಅವರ ಆತ್ಮಕಥನ, ‘ಸ್ಟೋರೀಸ್ ಐ ಮಸ್ಟ್ ಟೆಲ್; ದಿ ಎಮೋಷನಲ್ ಲೈಫ್ ಆಫ್ ಆ್ಯನ್ ಆ್ಯಕ್ಟರ್’ನ ಪ್ರಕಟಣೆ ನಿರ್ಬಂಧಿಸಲು ನಿರಾಕರಿಸಿದ್ದ ವಿಚಾರಣಾ ನ್ಯಾಯಾಲಯದ ಆದೇಶ ಪ್ರಶ್ನಿಸಿ ತ್ರಿಲೋಚನ ಬೇಡಿ ಸಲ್ಲಿಸಿದ್ದ ಈ ಮೇಲ್ಮನವಿಯನ್ನು ನ್ಯಾಯಮೂರ್ತಿ ಎಚ್‌.ಪಿ.ಸಂದೇಶ್ ಅವರಿದ್ದ ಏಕಸದಸ್ಯ ನ್ಯಾಯಪೀಠ ವಜಾಗೊಳಿಸಿ ಆದೇಶಿಸಿದೆ.

ADVERTISEMENT

‘ವಿಚಾರಣಾ ನ್ಯಾಯಾಲಯ ಅರ್ಜಿದಾರರ ಮನವಿಯನ್ನು ತಿರಸ್ಕರಿಸಿರುವುದಕ್ಕೆ ಸಕಾರಣ ನೀಡಿದೆ. ಹೀಗಾಗಿ, ಮೇಲ್ಮನವಿ ಪರಿಗಣಿಸಲು ಯಾವುದೇ ಆಧಾರಗಳಿಲ್ಲ’ ಎಂದು ನ್ಯಾಯಪೀಠ ಹೇಳಿದೆ.

‘ವಿಚಾರಣಾ ನ್ಯಾಯಾಲಯ 2022ರ ಸೆಪ್ಟೆಂಬರ್ 27ರಂದೇ ಆದೇಶ ನೀಡಿದೆ. ಆದರೆ, ಅರ್ಜಿದಾರರು 9 ತಿಂಗಳ ನಂತರ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದಾರೆ. 2021ರಲ್ಲಿಯೇ ಪುಸ್ತಕ ಪ್ರಕಟಗೊಂಡು, ಮಾರಾಟವಾಗಿದೆ. ಈ ಹಂತದಲ್ಲಿ ತಡೆ ನೀಡಲು ಸಾಧ್ಯವಿಲ್ಲ’ ಎಂದು ನ್ಯಾಯಪೀಠ ತಿಳಿಸಿದೆ.

‘ಕಬೀರ್ ಬೇಡಿ ತಮ್ಮ ಆತ್ಮಕಥೆ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗಲಿ ಎಂದು ಅದರಲ್ಲಿ ಸಾಕಷ್ಟು ಸುಳ್ಳುಗಳಿಂದ ಕೂಡಿದ ಅಂಶಗಳನ್ನು ದಾಖಲಿಸಿದ್ದಾರೆ’ ಎಂದು ಆರೋಪಿಸಿದ್ದ ತ್ರಿಲೋಚನ ಬೇಡಿ, ‘ನನಗೆ  ₹ 1 ಕೋಟಿ ಪರಿಹಾರ ನೀಡಲು ನಿರ್ದೇಶಿಸಬೇಕು’ ಎಂದು ಕೋರಿದ್ದರು.

‘ವೆಸ್ಟ್ ಲ್ಯಾಂಡ್ ಪಬ್ಲಿಕೇಷನ್ಸ್ ಪ್ರೈವೇಟ್‌ ಲಿಮಿಟೆಡ್‌ ಸಂಸ್ಥೆ’ ಈ ಆತ್ಮಕಥೆ ಪುಸ್ತಕವನ್ನು ಹೊರತಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.