ADVERTISEMENT

ಕೆಂಪೇಗೌಡ ಗೋಪುರ ಸರ್ವೇ ವರದಿ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 11 ಜುಲೈ 2019, 20:11 IST
Last Updated 11 ಜುಲೈ 2019, 20:11 IST
   

ಬೆಂಗಳೂರು: ‘ಕೋರ್ಟ್‌ ಆದೇಶದ ಅನುಸಾರ ನಡೆಸಲಾಗಿರುವ ಸರ್ವೇ ಕಾರ್ಯದಲ್ಲಿ, ನಗರದ ಕೆಂಪಾಂಬುಧಿ ಕೆರೆ ಬಳಿಯಲ್ಲಿರುವ ಕೆಂಪೇಗೌಡ ಗೋಪುರ ಪ್ರದೇಶ ಸಂರಕ್ಷಿತ ಪ್ರದೇಶವಲ್ಲ ಎಂಬುದು ಕಂಡು ಬಂದಿದೆ’ ಎಂದು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ತಿಳಿಸಿದೆ.

ಚಾಮರಾಜಪೇಟೆಯ ಎಸ್.ಆರ್. ಕಿರಣ್ ಕುಮಾರ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಅಭಯ್‌ ಎಸ್‌.ಓಕಾ ಮತ್ತು ಎಚ್‌.ಟಿ.ನರೇಂದ್ರಪ್ರಸಾದ್‌ ಅವರಿದ್ದ ವಿಭಾಗೀಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಸರ್ಕಾರದ ಪರ ವಕೀಲರು, ‘ಯಲಹಂಕ, ಲಾಲ್‌ಬಾಗ್, ಹಲಸೂರು, ಮೇಖ್ರಿ ವೃತ್ತದ ಬಳಿ ಇರುವ ಕೆಂಪೇಗೌಡ ಗೋಪುರಗಳ ಪ್ರದೇಶಗಳನ್ನು ಮಾತ್ರ ಸಂರಕ್ಷಿತ ಪ್ರದೇಶವೆಂದು ಕಾನೂನು ಪ್ರಕಾರ ಘೋಷಿಸಲಾಗಿದೆ’ ಎಂದು ತಿಳಿಸಿದರು.

ADVERTISEMENT

ಮನವಿ ಏನು?: ‘ಕೆಂಪಾಂಬುದಿ ಕೆರೆ ಬಳಿ ನಾಡಪ್ರಭು ಕೆಂಪೇಗೌಡ ನಿರ್ಮಿಸಿದ ಗೋಪುರವಿದೆ. ಅದರ ಸುತ್ತಲ ಪ್ರದೇಶವನ್ನು ಸಂರಕ್ಷಿತ ಮತ್ತು ನಿಷೇಧಿತ ಪ್ರದೇಶವೆಂದು ಪುರಾತತ್ವ ಇಲಾಖೆ ಘೋಷಿಸಿದೆ. ಆದರೆ ಆ ಸಂರಕ್ಷಿತ ಪ್ರದೇಶ ಒತ್ತುವರಿ ಮಾಡಿಕೊಂಡು ಕಟ್ಟಡಗಳನ್ನು ನಿರ್ಮಿಸಲಾಗಿದೆ ಇದರಿಂದ ಗೋಪುರಕ್ಕೂ ಧಕ್ಕೆ ಆಗಲಿದೆ. ಆದ್ದರಿಂದ ನಿಯಮಬಾಹಿರವಾಗಿ ಒತ್ತುವರಿ ಮಾಡಿ ನಿರ್ಮಿಸಲಾಗಿರುವ ಕಟ್ಟಡಗಳನ್ನು ತೆರವುಗೊಳಿಸಬೇಕು ಮತ್ತು ಗೋಪುರ ಹಾಗೂ ಸಂರಕ್ಷಿತ ಪ್ರದೇಶ ರಕ್ಷಣೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು’ ಎಂಬುದು ಅರ್ಜಿದಾರರ ಮನವಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.