ADVERTISEMENT

ಚಲನಚಿತ್ರ ಪ್ರಶಸ್ತಿ: ವಿವರಣೆ ಕೇಳಿದ ಹೈಕೋರ್ಟ್‌

​ಪ್ರಜಾವಾಣಿ ವಾರ್ತೆ
Published 2 ಜನವರಿ 2020, 23:41 IST
Last Updated 2 ಜನವರಿ 2020, 23:41 IST
ಹೈಕೋರ್ಟ್‌ 
ಹೈಕೋರ್ಟ್‌    

ಬೆಂಗಳೂರು: ‘ಸೆನ್ಸಾರ್ ಮಂಡಳಿಯಿಂದ 2019ರಲ್ಲಿ ಪ್ರಮಾಣಪತ್ರ ಪಡೆದ 17 ಕನ್ನಡ ಚಲನಚಿತ್ರಗಳನ್ನು 2018ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಹಾಗೂ ಸಹಾಯಧನಕ್ಕೆ ಆಯ್ಕೆ ಮಾಡಿರುವ ವಿವಾದಕ್ಕೆ ಸಂಬಂಧಿಸಿದಂತೆ ಏನು ಕ್ರಮ ಕೈಗೊಳ್ಳುವಿರಿ ಎಂಬ ಬಗ್ಗೆ ನಿಮ್ಮ ನಿಲುವು ಸ್ಪಷ್ಟಪಡಿಸಿ’ ಎಂದು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶಿಸಿದೆ.

ಈ ಕುರಿತಂತೆ ಚಿತ್ರ ನಿಮಾರ್ಪಕ ನರಸಿಂಹ ರಾಜು ಸಲ್ಲಿಸಿರುವ ರಿಟ್‌ ಅರ್ಜಿಯನ್ನು ನ್ಯಾಯಮೂರ್ತಿ ಎಚ್.ಟಿ. ನರೇಂದ್ರ ಪ್ರಸಾದ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ಜಿ.ಆರ್. ಮೋಹನ್ ವಾದ ಮಂಡಿಸಿ, ‘2017ನೇ ಸಾಲಿನ ಪಟ್ಟಿಯಲ್ಲಿರುವ 6 ಚಿತ್ರಗಳು 2018ರಲ್ಲಿ ಸೆನ್ಸಾರ್ ಮಂಡಳಿಯಿಂದ ಪ್ರಮಾಣಪತ್ರ ಪಡೆದಿವೆ. ಅವುಗಳ ಸಹಾಯಧನ ವಿತರಣೆಯನ್ನು ಸರ್ಕಾರ ಈಗಾಗಲೇ ತಡೆ ಹಿಡಿದಿದೆ. ಆದರೆ, 2018ನೇ ಸಾಲಿಗೆ ಆಯ್ಕೆಯಾಗಿರುವ ಚಿತ್ರಗಳ ಪೈಕಿ 2019ರಲ್ಲಿ ಪ್ರಮಾಣಪತ್ರ ಪಡೆದಿರುವ 17 ಚಿತ್ರಗಳ ವಿಚಾರದಲ್ಲಿ ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದು ವಿವರಿಸಿದರು.

ADVERTISEMENT

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ‘ಈ ವಿಚಾರದಲ್ಲಿ ಸರ್ಕಾರ ಯಾವ ಕ್ರಮ ಕೈಗೊಳ್ಳಲಿದೆ ಎಂಬ ಬಗ್ಗೆ ಅಗತ್ಯ ಮಾಹಿತಿ ಪಡೆದು ನ್ಯಾಯಾಲಯಕ್ಕೆ ತಿಳಿಸಿ’ ಎಂದು ಸರ್ಕಾರದ ಪರ ವಕೀಲರಿಗೆ ಸೂಚಿಸಿ, ವಿಚಾರಣೆಯನ್ನು ಒಂದು ವಾರ ಕಾಲ ಮುಂದೂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.