ADVERTISEMENT

ಮುಖ್ಯ ಕಾರ್ಯದರ್ಶಿಗೆ ಹೈಕೋರ್ಟ್‌ ನೋಟಿಸ್‌

ಚಿಕ್ಕಬಳ್ಳಾಪುರ ಹೂ ಮಾರುಕಟ್ಟೆ ಸ್ಥಳಾಂತರ ಪ್ರಶ್ನಿಸಿದ ಪಿಐಎಲ್

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2021, 15:53 IST
Last Updated 10 ನವೆಂಬರ್ 2021, 15:53 IST

ಬೆಂಗಳೂರು: ಚಿಕ್ಕಬಳ್ಳಾಪುರದಹೂವಿನ ಮಾರುಕಟ್ಟೆಯನ್ನು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಯಾರ್ಡ್‌ನಿಂದ ಕೆ.ವಿ.ಕ್ಯಾಂಪಸ್‌ ಬಳಿಯ ಖಾಸಗಿ ಜಾಗಕ್ಕೆ ಸ್ಥಳಾಂತರ ಮಾಡಿರುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ನೋಟಿಸ್‌ ಜಾರಿಗೊಳಿಸಲು ಹೈಕೋರ್ಟ್‌ ಆದೇಶಿಸಿದೆ.

ಈ ಕುರಿತಂತೆ ಚಂಬಳ್ಳಿ ಗ್ರಾಮದ ಎಸ್.ಕ್ಯಾತಪ್ಪ ಸೇರಿದಂತೆ ಐವರು ಸಲ್ಲಿಸಿರುವ ಅರ್ಜಿಯನ್ನು ಋತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ಎಂ.ಶಿವಪ್ರಕಾಶ್, ‘ಚಿಕ್ಕಬಳ್ಳಾಪುರ ಎಪಿಎಂಸಿ ಯಾರ್ಡ್‌ನಲ್ಲಿ ನಡೆಯುತ್ತಿದ್ದ ಹೂವಿನ ಮಾರುಕಟ್ಟೆಯನ್ನು ಕೋವಿಡ್‌–19ರ ಕಾರಣದಿಂದ ಸ್ಥಳೀಯ ಕೆ.ವಿ.ಕ್ಯಾಂಪಸ್‌ ಬಳಿಗೆ ಸ್ಥಳಾಂತರಿಸಲಾಗಿತ್ತು. ಈ ತಾತ್ಕಾಲಿಕ ಜಾಗದಲ್ಲಿ ಹೂವುಗಳನ್ನು ಕಾಪಿಟ್ಟು ವಹಿವಾಟು ನಡೆಸಲು ಮತ್ತು ಸಂರಕ್ಷಿಸಲು ಯಾವುದೇ ಅವಕಾಶವಿಲ್ಲ. ಅಂತೆಯೇ ಮಳೆಗಾಲದಲ್ಲಿ ಜಮೀನು ಕೊಚ್ಚೆಯಾಗಿ ಪರಿವರ್ತನೆ ಹೊಂದಿ ಹೂವಿನ ಚೀಲ ನೆಲದ ಮೇಲಿಟ್ಟರೆ ಸಾಕು ಹಾಳಾಗಿ ಹೋಗುತ್ತಿವೆ’ ಎಂದು ವಿವರಿಸಿದರು.

ADVERTISEMENT

’ಕೋವಿಡ್–19ರ ತಡೆಗಾಗಿ ಹೂವಿನ ವ್ಯಾಪಾರವನ್ನು ಈಗಿರುವ ತಾತ್ಕಾಲಿಕ ಮಾರುಕಟ್ಟೆಯಿಂದಲೇ ನಿರ್ವಹಿಸುವಂತೆ ಚಿಕ್ಕಬಳ್ಳಾಪುರ ಎಪಿಎಂಸಿ ಕಾರ್ಯದರ್ಶಿ ಪ್ರಕಟಣೆ ಹೊರಡಿಸಿರುತ್ತಾರೆ. ರೈತರು ಎಸ್‌ಒಪಿ ಅನುಸಾರ ಎಚ್ಚರಿಕೆಯ ಕ್ರಮ ವಹಿಸಿ ವ್ಯಾಪಾರ ಮಾಡಲು ಸಿದ್ಧವಿದ್ದರೂ ಅಧಿಕಾರಿಗಳು ಅನುಮತಿ ನೀಡುತ್ತಿಲ್ಲ. ಇದರಿಂದ ಹೂ ಬೆಳೆಗಾರರಿಗೆ ಸಾಕಷ್ಟು ತೊಂದರೆ ಉಂಟಾಗಿದ್ದು, ತಕ್ಷಣವೇ ಎಪಿಎಂಸಿ ಮಾರುಕಟ್ಟೆ ಪ್ರಾಂಗಣಕ್ಕೆ ಮರು ಸ್ಥಳಾಂತರಿಸಲು ನಿರ್ದೇಶಿಸಬೇಕು’ ಎಂದು ಕೋರಿದರು.

ಇದನ್ನು ಮನ್ನಿಸಿದ ನ್ಯಾಯಪೀಠ, ಪ್ರತಿವಾದಿಗಳಾದ ಸಹಕಾರ ಹಾಗೂ ಎಪಿಎಂಸಿ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು, ಎಪಿಎಂಸಿ ನಿರ್ದೇಶಕರು, ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ, ಚಿಕ್ಕಬಳ್ಳಾಪುರ ಎಪಿಎಂಸಿ ಕಾರ್ಯದರ್ಶಿಗಳಿಗೂ ನೋಟಿಸ್‌ ಜಾರಿಗೆ ಆದೇಶಿಸಿ ವಿಚಾರಣೆ ಮುಂದೂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.