ADVERTISEMENT

ಕಾರ್ಖಾನೆಗಳಲ್ಲಿ ಪಾಲನೆಯಾಗದ ಎಸ್‌ಒಪಿ: ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2020, 22:14 IST
Last Updated 5 ಆಗಸ್ಟ್ 2020, 22:14 IST
ಹೈಕೋರ್ಟ್
ಹೈಕೋರ್ಟ್   

ಬೆಂಗಳೂರು: ‘ಕಾರ್ಖಾನೆಗಳು ಮತ್ತು ಇತರೆ ಉದ್ದಿಮೆಗಳಲ್ಲಿ ಕೋವಿಡ್ ಹರಡುವುದನ್ನು ತಡೆಗಟ್ಟಲು ಮಾರ್ಗದರ್ಶಿ ಸೂತ್ರಗಳನ್ನು (ಎಸ್‌ಒಪಿ) ಪಾಲಿಸುತ್ತಿಲ್ಲ’ ಎಂಬ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಆಧರಿಸಿ ರಾಜ್ಯ ಸರ್ಕಾರಕ್ಕೆ ನೋಟಿಸ್ ನೀಡಲು ಹೈಕೋರ್ಟ್‌ ಆದೇಶಿಸಿದೆ.

ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್ (ಎಐಟಿಯುಸಿ) ಸಲ್ಲಿಸಿದ್ದ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

‘ಕೈಗಾರಿಕೆಗಳು ಮತ್ತು ಇತರ ಸಂಸ್ಥೆಗಳಲ್ಲಿ ಕೋವಿಡ್ ಹೆಚ್ಚುತ್ತಿದೆ. ಒಂದೊಂದು ಕಾರ್ಖಾನೆಯಲ್ಲೂ ವಿಭಿನ್ನವಾದ ಮಾರ್ಗಗಳನ್ನು ಅನುಸರಿಸಲಾಗುತ್ತಿದೆ. ಎಸ್‌ಒಪಿ ಅನುಸರಿಸದ ಕಾರಣ ಕಾರ್ಮಿಕರು ಸೋಂಕಿಗೆ ತುತ್ತಾಗುತ್ತಿದ್ದಾರೆ. ಎಸ್‌ಒಪಿ ಕಡ್ಡಾಯವಾಗಿ ಪಾಲನೆ ಆಗುವಂತೆ ನೋಡಿಕೊಳ್ಳುವ ಪ್ರಯತ್ನವನ್ನು ಸರ್ಕಾರ ಮಾಡಿಲ್ಲ’ ಎಂದು ಅರ್ಜಿದಾರರು ಹೇಳಿದ್ದಾರೆ.

ADVERTISEMENT

‘ಕಾರ್ಮಿಕರು ಕ್ವಾರಂಟೈನ್‌ನಲ್ಲಿ ಇದ್ದರೆ ಅವರಿಗೆ ವೇತನಸಹಿತ ರಜೆ ನೀಡಲು ನಿರಾಕರಿಸಲಾಗುತ್ತಿದೆ. ವೇತನದ ಮೇಲೆ ಅವಲಂಬಿತವಾಗಿರುವ ಕಾರ್ಮಿಕರು ಕಡ್ಡಾಯವಾಗಿ ಕ್ವಾರಂಟೈನ್‌ನಲ್ಲಿ ಇರುವುದು ಕಷ್ಟವಾಗಿದೆ’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.