ADVERTISEMENT

ರಸ್ತೆ ಅಭಿವೃದ್ಧಿಗೆ 8 ಸಾವಿರ ಮರ ಬಲಿ: ಹೈಕೋರ್ಟ್ ನೋಟಿಸ್

​ಪ್ರಜಾವಾಣಿ ವಾರ್ತೆ
Published 16 ಜನವರಿ 2021, 19:30 IST
Last Updated 16 ಜನವರಿ 2021, 19:30 IST
ಹೈಕೋರ್ಟ್
ಹೈಕೋರ್ಟ್   

ಬೆಂಗಳೂರು: ನಗರದ ಸುತ್ತಮುತ್ತ 8,561 ಮರಗಳನ್ನು ಬಲಿ ಪಡೆಯುವ 155 ಕಿಲೋ ಮೀಟರ್ ರಸ್ತೆ ಅಭಿವೃದ್ಧಿ ಯೋಜನೆ ಪ್ರಶ್ನಿಸಿ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಆಧರಿಸಿ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್ ನೀಡಿದೆ.

‘ಪರಿಸರಕ್ಕೆ ಸಂಬಂಧಿಸಿದ ಯಾವುದೇ ಪ್ರಾಧಿಕಾರದಿಂದ ಅನುಮತಿ ಪಡೆಯದೇ ಕಾಮಗಾರಿಯನ್ನು ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ(ಕೆಆರ್‌ಡಿಸಿಎಲ್‌) ಆರಂಭಿಸಿದೆ’ ಎಂದು ಆರೋಪಿಸಿ ವಾಯ್ಸ್ ಆಫ್ ಸರ್ಜಾಪುರ, ಜಾಟ್ಕಾ ಡಾಟ್ ಆರ್ಗ್‌ ಮತ್ತು ರಜಿನಿ ಸಂತೋಷ್ ಅರ್ಜಿ ಸಲ್ಲಿಸಿದ್ದಾರೆ.

ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠ, ಆಕ್ಷೇಪಣೆ ಸಲ್ಲಿಸಲು ಸರ್ಕಾರಕ್ಕೆ ನಿರ್ದೇಶನ ನೀಡಿತು. ಫೆಬ್ರುವರಿ 24ಕ್ಕೆ ವಿಚಾರಣೆ ಮುಂದೂಡಿತು.

ADVERTISEMENT

ಜಿಲ್ಲಾ ರಸ್ತೆಗಳು, ರಾಜ್ಯ ಹೆದ್ದಾರಿಗಳು, ರಾಷ್ಟ್ರೀಯ ಹೆದ್ದಾರಿಗಳನ್ನು ಸಂಯೋಜಿಸಿ ರಸ್ತೆ ವಿಸ್ತರಣೆ ಮಾಡುವ ಕಾರ್ಯವನ್ನು ಕೆಆರ್‌ಡಿಸಿಎಲ್‌ ಆರಂಭಿಸಿದೆ. ರೈಲ್ವೆ ಮೇಲ್ಸೇತುವೆ, ಕೆಳಸೇತುವೆ, ಗ್ರೇಡ್ ಸಪರೇಟರ್‌, ಎಲಿವೇಟೆಡ್ ಕಾರಿಡಾರ್‌ಗಳನ್ನು ಈ ಯೋಜನೆ ಒಳಗೊಂಡಿದೆ.

‘ಕಾನೂನು ಕಣ್ಣಿಗೆ ಮಣ್ಣೆರಚಲು ಒಂದೇ ಯೋಜನೆಯನ್ನು 10 ವಿಭಾಗವನ್ನಾಗಿ ವಿಂಗಡಿಸಲಾಗಿದೆ. ನಗರದ ಸುತ್ತಮುತ್ತಲ ಮರಗಿಡಗಳು ನಗರದ ಪರಿಸರ ಉತ್ತಮವಾಗಿರಲು ಕಾರಣವಾಗಿವೆ. ಜೊತೆಗೆ 14 ಕರೆಗಳಿಗೂ ಈ ಯೋಜನೆಯಿಂದ ಹಾನಿ ಉಂಟಾಗಲಿದೆ. ಈ ರಸ್ತೆ ಯೋಜನೆಗಾಗಿ ಮರಗಳನ್ನು ಕಡಿದರೆ ಪರಿಸರ ಅಸಮತೋಲನ ಉಂಟಾಗಲಿದೆ’ ಎಂದು ಅರ್ಜಿದಾರರು ದೂರಿದ್ದಾರೆ.

‘ಪ್ರಸ್ತಾವಿತ ಯೋಜನೆಯಲ್ಲಿ ರಸ್ತೆಯ ಒಂದು ಭಾಗ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ಪರಿಸರ ಸೂಕ್ಷ್ಮ ವಲಯದ ಮೂಲಕವೂ ಹಾದು ಹೋಗುತ್ತದೆ. ವನ್ಯಜೀವಿ ಆವಾಸ ಸ್ಥಾನದ ಮೇಲೂ ಪರಿಣಾಮ ಬೀರಲಿದೆ’ ಎಂದು ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.