ADVERTISEMENT

ಅಭಿಯೋಜಕ ಹುದ್ದೆಗಳ ಭರ್ತಿ: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ

​ಪ್ರಜಾವಾಣಿ ವಾರ್ತೆ
Published 9 ಜುಲೈ 2021, 22:15 IST
Last Updated 9 ಜುಲೈ 2021, 22:15 IST
ಹೈಕೋರ್ಟ್
ಹೈಕೋರ್ಟ್   

ಬೆಂಗಳೂರು: ಖಾಲಿ ಇರುವ ಎಲ್ಲ ಅಭಿಯೋಜಕರ ಹುದ್ದೆಗಳನ್ನು ಭರ್ತಿ ಮಾಡಲು ತ್ವರಿತವಾಗಿ ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ. ಹೆಚ್ಚುವರಿ ಹುದ್ದೆಗಳನ್ನು ಸೃಜಿಸುವ ಸಂಬಂಧವೂ ನಿರ್ಧಾರ ತೆಗೆದುಕೊಳ್ಳುವಂತೆ ತಿಳಿಸಿದೆ.

ಈ ಸಂಬಂಧ 2019ರ ಸೆಪ್ಟೆಂಬರ್‌ನಲ್ಲಿ ಸ್ವಯಂ ಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿಕೊಂಡು ಆದೇಶ ನೀಡಿದ್ದರೂ ಹುದ್ದೆಗಳು ಖಾಲಿ ಉಳಿದಿವೆ ಎಂದು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠ ಅಸಮಾಧಾನ ವ್ಯಕ್ತಪಡಿಸಿತು.

‘58 ಹಿರಿಯ ಸಹಾಯಕ ಅಭಿಯೋಜಕರ ಹುದ್ದೆಗಳು ಖಾಲಿ ಇವೆ. ಸಹಾಯಕ ಅಭಿಯೋಜಕರ 254 ಹುದ್ದೆಗಳಲ್ಲಿ 205 ಹುದ್ದೆಗಳ ಭರ್ತಿಗೆ ಮಾತ್ರ ಪ್ರಕ್ರಿಯೆ ಆರಂಭಿಸಲಾಗಿದೆ’ ಎಂಬ ವಿವರ ಪರಿಶೀಲಿಸಿದ ಪೀಠ, ‘ವಿಚಾರಣೆಗಳು ವಿಳಂಬ ಆಗುವುದನ್ನು ತಪ್ಪಿಸಲು ಈ ಹುದ್ದೆಗಳನ್ನು ಭರ್ತಿ ಮಾಡಬೇಕು’ ಎಂದು ತಿಳಿಸಿತು.

ADVERTISEMENT

‘ವಿಚಾರಣೆ ವಿಳಂಬದ ಜತೆಗೆ ಆರೋಪಿಗಳ ಮೂಲಭೂತ ಹಕ್ಕುಗಳನ್ನು ಕಸಿದುಕೊಂಡಂತೆ ಆಗಲಿದೆ. ಅದು ಸರಿಯಾದ ಕ್ರಮವಲ್ಲ. ಖಾಲಿ ಹುದ್ದೆ ಭರ್ತಿ ಮಾಡುವ ಜೊತೆಗೆ ಹೆಚ್ಚುವರಿ ಹುದ್ದೆಗಳನ್ನು ಸೃಜಿಸುವ ಸಂಬಂಧ ಅನುಸರಣಾ ವರದಿ ಸಲ್ಲಿಸಬೇಕು’ ಎಂದು ಪೀಠ ನಿರ್ದೇಶನ ನೀಡಿತು. ವಿಚಾರಣೆಯನ್ನು ಆ.27ಕ್ಕೆ ಮುಂದೂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.