ADVERTISEMENT

ವೈದ್ಯಕೀಯ ಸಂಸ್ಥೆ ನವೀಕರಣಕ್ಕೆ ಷರತ್ತು ಸಡಿಲ: ನೋಟಿಸ್

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2021, 21:37 IST
Last Updated 6 ಏಪ್ರಿಲ್ 2021, 21:37 IST

ಬೆಂಗಳೂರು: ಖಾಸಗಿ ವೈದ್ಯಕೀಯ ಸಂಸ್ಥೆಗಳ ನೋಂದಣಿ ಮತ್ತು ನವೀಕರಣಕ್ಕೆ ವ್ಯಾಪಾರ ಪರವಾನಗಿ (ಟ್ರೇಡ್ ಲೈಸೆನ್ಸ್) ಮತ್ತು ಸ್ವಾಧೀನಾನುಭ ಪ್ರಮಾಣಪತ್ರ ಕಡ್ಡಾಯ ಎಂಬ ಷರತ್ತು ಸಡಿಲಗೊಳಿಸಿರುವ ಸರ್ಕಾರದ ಸುತ್ತೋಲೆ ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಅಲ್ಲಿಕೆಯಾಗಿದೆ.

ಭಾರತ್ ಯುವಜನ ಸೇನೆ ಸಂಸ್ಥಾಪಕ ಅಧ್ಯಕ್ಷ ರಾಮಾನಂದ್ ಸಾಗರ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠ, ರಾಜ್ಯ ಸರ್ಕಾರ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯುಕ್ತರಿಗೆ ನೋಟಿಸ್ ನೀಡಲು ಆದೇಶಿಸಿದೆ.

’ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ (ಕೆಪಿಎಂಇ) ಕಾಯ್ದೆ–2007ರಲ್ಲಿ ಸೂಚಿಸಿರುವ ನಿಯಮಗಳನ್ನು ಸಡಿಲಗೊಳಿಸಿ 2020ರ ಆಗಸ್ಟ್ 17ರಂದು ಸುತ್ತೊಲೆ ಹೊರಡಿಸಲಾಗಿದೆ. ಖಾಸಗಿ ವೈದ್ಯಕೀಯ ಸಂಸ್ಥೆಗಳ ಸಂಘಗಳಿಂದ ಪಡೆದ ಸಲಹೆಗಳಗಳನ್ನು ಆಧರಿಸಿ ಈ ಸುತ್ತೋಲೆ ಹೊರಡಿಸಲಾಗಿದೆ. ಇದರಿಂದ ಸರ್ಕಾರಕ್ಕೆ ಬರಬೇಕಾದ ವರಮಾನ ಖೋತಾ ಆಗಲಿದೆ. ಅಲ್ಲದೇ, ಕಾಯ್ದೆಯ ಮೂಲ ಉದ್ದೇಶಕ್ಕೆ ವಿರುದ್ಧವಾಗಿದೆ’ ಎಂದು ಅರ್ಜಿದಾರರು ತಿಳಿಸಿದ್ದಾರೆ.

ADVERTISEMENT

ವಿಚಾರಣೆಯನ್ನು ಪೀಠ ಜೂನ್ 7ಕ್ಕೆ ಮುಂದೂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.