ADVERTISEMENT

ಸಂತ್ರಸ್ತೆ 18 ವರ್ಷ ದಾಟಿದ್ದರೆ ಪಾಟಿ ಸವಾಲಿಗೆ ಅಭ್ಯಂತರವಿಲ್ಲ: ಹೈಕೋರ್ಟ್

​ಪ್ರಜಾವಾಣಿ ವಾರ್ತೆ
Published 11 ಜೂನ್ 2022, 20:07 IST
Last Updated 11 ಜೂನ್ 2022, 20:07 IST
ಹೈಕೋರ್ಟ್
ಹೈಕೋರ್ಟ್    

ಬೆಂಗಳೂರು: ‘ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯಡಿ ದಾಖಲಾದ ಪ್ರಕರಣಗಳಲ್ಲಿ ಸಂತ್ರಸ್ತ ಮಗುವನ್ನು ಮತ್ತೆ ಮತ್ತೆ ಪಾಟಿ ಸವಾಲಿಗೆ ಒಳಪಡಿಸಬಾರದು ಎಂಬ ನಿಯಮವಿದೆಯಾದರೂ, ಸಂತ್ರಸ್ತರಿಗೆ 18 ವರ್ಷ ತುಂಬಿದರೆ ಆಗ ಅವರನ್ನು ಮತ್ತೆ ಪಾಟಿ ಸವಾಲಿಗೆ ಒಳಪಡಿಸಲು ಯಾವುದೇ ಅಭ್ಯಂತರವಿಲ್ಲ’ ಎಂದು ಹೈಕೋರ್ಟ್ ಆದೇಶಿಸಿದೆ.

ಪೋಕ್ಸೊ ಪ್ರಕರಣವೊಂದರ ಸಂತ್ರಸ್ತೆಯನ್ನು ಅಪರಾಧ ದಂಡ ಪ್ರಕ್ರಿಯಾ ಸಂಹಿತೆ (ಸಿಆರ್‌ಪಿಸಿ) ಕಲಂ 311ರ ಪ್ರಕಾರ ಮರು ವಿಚಾರಣೆಗೆ ಕರೆಸಿಕೊಳ್ಳಬೇಕು ಎಂದು ಕೋರಿ ಜಾಲಹಳ್ಳಿ ನಿವಾಸಿಯಾದ ಆರೋಪಿ ಮೊಹಮ್ಮದ್ ಅಲಿ ಅಕ್ಬರ್ (23) ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣಾ ನ್ಯಾಯಾಲಯ ವಜಾಗೊಳಿಸಿತ್ತು. ಈ ಆದೇಶವನ್ನು ಹೈಕೋರ್ಟ್ನಲ್ಲಿ ಪ್ರಶ್ನಿಸಲಾಗಿತ್ತು.

ಅರ್ಜಿ ವಿಚಾರಣೆ ನಡೆಸಿದ ನ್ಯಾಯ ಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ, ಪೋಕ್ಸೊ ಪ್ರಕರಣಗಳ ಸಂತ್ರಸ್ತರನ್ನು ಮತ್ತೆ ಮತ್ತೆ ನ್ಯಾಯಾಲಯಗಳಿಗೆ ಕರೆಸಿಕೊಂಡು ವಿಚಾರಣೆಗೆ ಒಳಪಡಿಸಬಾರದು ಎಂದು ಕಾಯ್ದೆಯ ಕಲಂ 33 (5) ಹೇಳುತ್ತದೆ. ಆದರೆ, ಈ ಪ್ರಕರಣದಲ್ಲಿ ಸಂತ್ರಸ್ತೆಯ ವಯಸ್ಸು 18 ದಾಟಿರುವ ಕಾರಣ ಸೆಕ್ಷನ್ 33 (5)ರ ಕಾಠಿಣ್ಯತೆ ದುರ್ಬಲಗೊಳ್ಳುತ್ತದೆ. ಆದ್ದರಿಂದ, ಆರೋಪಿಯ ಮನವಿಯಂತೆ ಸಂತ್ರಸ್ತೆಯನ್ನು ಪಾಟಿ ಸವಾಲಿಗೆ ಒಳಪಡಿಸಬಹುದು ಎಂದು ಅಭಿಪ್ರಾಯಪಟ್ಟಿದೆ.

ADVERTISEMENT

ಪ್ರಕರಣವೇನು?: 'ಮೊಹಮ್ಮದ್ ಅಲಿ ನನ್ನ ಅಪ್ರಾಪ್ತ ವಯಸ್ಕ ಮಗಳ ಮೇಲೆ 2018ರ ಏಪ್ರಿಲ್ನಲ್ಲಿ ಮನೆಯಲ್ಲಿ ಯಾರೂ ಇಲ್ಲದ ವೇಳೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ' ಎಂದು ಆರೋಪಿಸಿ ಸಂತ್ರಸ್ತೆಯ ತಾಯಿ ಪೊಲೀಸರಿಗೆ ದೂರು ನೀಡಿದ್ದರು.

ದೂರುದಾರ ಮಹಿಳೆ ಆರೋಪಿಯ ಸೋದರತ್ತೆ. ಪ್ರಕರಣ ದಾಖಲು ಮಾಡಿಕೊಂಡಿದ್ದ ಪೊಲೀಸರು ತನಿಖೆ ನಡೆಸಿ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು. ಪ್ರಕರಣ ಸದ್ಯ ಸೆಷನ್ಸ್ ಕೋರ್ಟ್‌ನಲ್ಲಿ ವಿಚಾರಣಾ ಹಂತದಲ್ಲಿದೆ. ಏತನ್ಮಧ್ಯೆ, ಸಂತ್ರಸ್ತೆಯನ್ನು ಹೆಚ್ಚಿನ ಪಾಟಿ
ಸವಾಲಿಗೆ ಒಳಪಡಿಸುವಂತೆ ಕೋರಿ ಆರೋಪಿ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣಾ ನ್ಯಾಯಾಲಯ ತಿರಸ್ಕರಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.