ADVERTISEMENT

ಎಸ್.ಮೂರ್ತಿ ಮರು ನೇಮಕಕ್ಕೆ ಹೈಕೋರ್ಟ್ ಆದೇಶ

​ಪ್ರಜಾವಾಣಿ ವಾರ್ತೆ
Published 2 ಜುಲೈ 2020, 21:16 IST
Last Updated 2 ಜುಲೈ 2020, 21:16 IST
ಎಸ್‌.ಮೂರ್ತಿ
ಎಸ್‌.ಮೂರ್ತಿ   

ಬೆಂಗಳೂರು: ‘ವಿಧಾನಸಭೆ ಕಾರ್ಯದರ್ಶಿಹುದ್ದೆಯಿಂದ ಎಸ್.ಮೂರ್ತಿ ಅವರನ್ನು ಅಮಾನತುಗೊಳಿಸಿ ವಿಧಾನಸಭೆ ವಿಶೇಷ ಮಂಡಳಿ ಹೊರಡಿಸಿರುವ ಆದೇಶ‌ ನಿಯಮಕ್ಕೆ ಅನುಗುಣವಾಗಿಲ್ಲ. ಆದ್ದರಿಂದ,ಶಿಸ್ತುಕ್ರಮ ವಿಚಾರಣಾ‌ ಸಮಿತಿಯ ಅಂತಿಮ ಫಲಿತಾಂಶಕ್ಕೆ ಒಳಪಟ್ಟು ಅವರನ್ನು ಮೂರು ವಾರದೊಳಗೆ ಮರು ನೇಮಕ‌ ಮಾಡಬೇಕು’ ಎಂದು ಹೈಕೋರ್ಟ್ ಅದೇಶಿಸಿದೆ.

ಅಮಾನತು ಆದೇಶ ರದ್ದುಪಡಿಸುವಂತೆ ಕೋರಿ ಎಸ್.ಮೂರ್ತಿ ಸಲ್ಲಿಸಿದ್ದ ರಿಟ್ ಅರ್ಜಿಯ ವಿಚಾರಣೆ ಪೂರ್ಣಗೊಳಿಸಿ‌ ಕಾಯ್ದಿರಿಸಿದ್ದ ಆದೇಶವನ್ನು ನ್ಯಾಯಮೂರ್ತಿ ಪಿ.ಬಿ. ಭಜಂತ್ರಿ ಅವರಿದ್ದ ಏಕಸದಸ್ಯ ನ್ಯಾಯಪೀಠ ಗುರುವಾರ ಪ್ರಕಟಿಸಿದೆ.

‘ಅರ್ಜಿದಾರರನ್ನು ಅಮಾನತು ಮಾಡಿದ ಆದೇಶವನ್ನು‌ ಪರಿಗಣಿಸುವಲ್ಲಿ ಹಾಗೂ‌ ಕಾಲ ಕಾಲಕ್ಕೆ ಮರು ಪರಿಶೀಲಿಸುವಲ್ಲಿ ವಿಶೇಷ ಮಂಡಳಿ ವಿಫಲವಾಗಿದೆ’ ಎಂದು ನ್ಯಾಯಪೀಠ ಹೇಳಿದೆ.

ADVERTISEMENT

‘ಈ ಪ್ರಕರಣದಲ್ಲಿ ಒಂದು ವರ್ಷ ಎಂಟು ತಿಂಗಳು ಕಳೆದರೂ ವಿಚಾರಣೆ ಪೂರ್ಣಗೊಳಿಸಿಲ್ಲ. 2019ರ ಫೆಬ್ರುವರಿ 2ರಂದು ಎರಡು ವಾರದೊಳಗೆ ವಿವರಣೆ ನೀಡುವಂತೆ ಅರ್ಜಿದಾರರಿಗೆ ಸೂಚಿಸಲಾಗಿತ್ತು.‌‌ ಅರ್ಜಿದಾರರು ವಿವರಣೆ ನೀಡುವ ‌ಮುನ್ನವೇ 2019ರ ಫೆ.26ರಂದು ವಿಚಾರಣಾಧಿಕಾರಿ ನೇಮಕ‌ ಮಾಡಲಾಗಿದೆ. 2019ರ ಮೇ‌ 27ರಂದು ಅರ್ಜಿದಾರರು ತಮ್ಮ ವಿರುದ್ಧದ ಆರೋಪಗಳಿಗೆ ಉತ್ತರ ನೀಡಿದ್ದಾರೆ.‌ ಆದರೆ, ಉಸ್ತುವಾರಿ ಕಾರ್ಯದರ್ಶಿ ಅರ್ಜಿದಾರರ ವಿವರಣೆಯನ್ನು ವಿಶೇಷ ಮಂಡಳಿ ಮುಂದೆ ಮಂಡಿಸಿಲ್ಲ‌’ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ಇದೇ ವೇಳೆ, ‘ವಿಚಾರಣಾ ಪ್ರಾಧಿಕಾರ ಆದೇಶ ಹೊರಡಿಸದಂತೆ ನಿರ್ಬಂಧಿಸಿ‌ ಇದೇ ಹೈಕೋರ್ಟ್ ನ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ಏಕಸದಸ್ಯ ನ್ಯಾಯಪೀಠ 2019 ಸೆಪ್ಟೆಂಬರ್ 4ರಂದು ಹೊರಡಿಸಿರುವ ಆದೇಶವನ್ನು ತಿದ್ದುಪಡಿ‌ ಮಾಡಲು ಕೋರಿ ವಿಚಾರಣಾ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಲು ಪ್ರತಿವಾದಿ ವಿಶೇಷ ಮಂಡಳಿ ಮುಕ್ತವಾಗಿದೆ’ ಎಂದೂ ನ್ಯಾಯಪೀಠ ವಿವರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.