ADVERTISEMENT

ಅಕ್ರಮ ಬಂಧನ: ಪೊಲೀಸರ ವಿರುದ್ಧ ವಿಚಾರಣೆ ರದ್ದುಪಡಿಸಲು ನಕಾರ

​ಪ್ರಜಾವಾಣಿ ವಾರ್ತೆ
Published 29 ಮೇ 2021, 21:19 IST
Last Updated 29 ಮೇ 2021, 21:19 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು: ಸರಗಳ್ಳತನ ಆರೋಪದಲ್ಲಿ ವ್ಯಕ್ತಿಯನ್ನು ಅಕ್ರಮ ಬಂಧನದಲ್ಲಿ ಇರಿಸಲಾಗಿತ್ತು ಎಂಬ ಆರೋಪದ ಪ್ರಕರಣದಲ್ಲಿ ಏಳು ಪೊಲೀಸರ ವಿರುದ್ಧ ನಡೆಯುತ್ತಿರುವ ವಿಚಾರಣೆ ರದ್ದುಪಡಿಸಲು ಹೈಕೋರ್ಟ್ ನಿರಾಕರಿಸಿದೆ.

‘ಮುಗ್ಧರನ್ನು ಅಕ್ರಮವಾಗಿ ಬಂಧಿಸುವುದು ಮತ್ತು ಅವರನ್ನು ಕ್ರೂರವಾಗಿ ನಡೆಸಿಕೊಳ್ಳುವುದು ಪೊಲೀಸ್ ಅಧಿಕಾರಿಗಳ ಕರ್ತವ್ಯದ ಭಾಗ ಎಂದು ಪರಿಗಣಿಸಲು ಕಾನೂನಿನಲ್ಲಿ ಅವಕಾಶ ಇಲ್ಲ’ ಎಂದು ನ್ಯಾಯಮೂರ್ತಿ ಎಚ್‌.ಪಿ. ಸಂದೇಶ್ ಅವರಿದ್ದ ಪೀಠ ಅಭಿಪ್ರಾಯಪಟ್ಟಿತು.

‘ಒಬ್ಬ ವ್ಯಕ್ತಿಯನ್ನು 24 ಗಂಟೆಗಳಿಗೂ ಹೆಚ್ಚು ಕಾಲ ಲಾಕಪ್‌ನಲ್ಲಿ ಇಟ್ಟುಕೊಳ್ಳಲು ಅವಕಾಶ ಇಲ್ಲ. ಅದು ಕರ್ತವ್ಯ ಲೋಪ ಆಗಲಿದೆ’ ಎಂಬ ಸುಪ್ರೀಂ ಕೋರ್ಟ್‌ ಆದೇಶವನ್ನು ಪೀಠ ಉಲ್ಲೇಖಿಸಿತು.

ADVERTISEMENT

ದೊಡ್ಡಬಳ್ಳಾಪುರ ನಿವಾಸಿ ಮನು ಅವರನ್ನು 2010ರ ಮೇ ತಿಂಗಳಿನಲ್ಲಿ ಪೊಲೀಸರು ಕರೆದೊಯ್ದು ಎರಡು ದಿನಗಳ ನಂತರ ಬಿಡುಗಡೆ ಮಾಡಿದ್ದರು.‌ ಈ ಸಂಬಂಧ ಎಫ್‌ಐಆರ್ ದಾಖಲಿಸಲು ಪೊಲೀಸರು ನಿರಾಕರಿಸಿದ ನಂತರ ಮನು ಅವರ ತಂದೆ ಖಾಸಗಿ ದೂರು ದಾಖಲಿಸಿದ್ದರು. ‘ಮಗನನ್ನು ಪೊಲೀಸರು ಥಳಿಸಿ ಅಮಾನವೀಯವಾಗಿ ನಡೆಸಿಕೊಂಡಿದ್ದಾರೆ. ಸಂಬಂಧ ಇಲ್ಲದಿದ್ದರೂ ಪ್ರಕರಣದಲ್ಲಿ ಸೇರಿಸಿ ಅವನ ಜೀವನ ಹಾಳು ಮಾಡಲು ಪ್ರಯತ್ನಿಸಿದ್ದಾರೆ’ ಎಂದು ಆರೋಪಿಸಿದ್ದರು.

ಈ ಸಂಬಂಧ ಚಿಕ್ಕಬಳ್ಳಾಪುರ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ವಿಚಾರಣೆ ನಡೆಸುತ್ತಿದೆ. ಇದನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಡಿವೈಎಸ್‌ಪಿ ಎಸ್. ಶಿವಕುಮಾರ್, ಪೊಲೀಸ್ ಇನ್‌ಸ್ಪೆಕ್ಟರ್‌ ಮುನಿರೆಡ್ಡಿ, ಕಾನ್‌ಸ್ಟೆಬಲ್‌ಗಳಾದ ಬಾಲಾಜಿ ಸಿಂಗ್‌, ಆನಂದ್, ಟಿ. ವೆಂಕಟೇಶ್, ಮುನಿಯಪ್ಪ(ನಿವೃತ್ತ), ಚಾಲಕ ಮೋಹನ್‌ ಅರ್ಜಿ ಸಲ್ಲಿಸಿದ್ದಾರೆ.

‘ಸಂತ್ರಸ್ತರ ತಂದೆ ನೀಡಿದ ಖಾಸಗಿ ದೂರು ಆಧರಿಸಿ ಪ್ರಕರಣ ದಾಖಲಿಸಲಾಗಿದೆ. ಸಿಆರ್‌ಪಿಸಿ ಸೆಕ್ಷನ್ 197ರ ಪ್ರಕಾರ ಯಾವುದೇ ಪೂರ್ವಾನುಮತಿ ಪಡೆದಿಲ್ಲ’ ಎಂದು ಅರ್ಜಿದಾರರು ತಿಳಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.