ADVERTISEMENT

ಮಗು ತನ್ನ ಬಳಿಯೇ ಇರಬೇಕೆಂದು ಹಟ ಹಿಡಿದ ತಾಯಿಗೆ ₹ 50 ಸಾವಿರ ದಂಡ

​ಪ್ರಜಾವಾಣಿ ವಾರ್ತೆ
Published 13 ಜನವರಿ 2022, 19:31 IST
Last Updated 13 ಜನವರಿ 2022, 19:31 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು:ಕೌಟುಂಬಿಕ ವ್ಯಾಜ್ಯವೊಂದರಲ್ಲಿ ಮಗು ತನ್ನ ಬಳಿಯೇ ಇರಬೇಕೆಂದು ಹಟ ಹಿಡಿದಿದ್ದ ತಾಯಿಗೆ ಹೈಕೋರ್ಟ್‌ ₹ 50 ಸಾವಿರ ದಂಡ ವಿಧಿಸಿ ಬುದ್ಧಿಮಾತು ಹೇಳಿದೆ.

ಈ ಕುರಿತಂತೆ ಮಗುವಿನ ತಾಯಿ ಸಲ್ಲಿಸಿದ್ದ ಎಂಎಫ್‌ಎ (ಮಿಸಲೇನಿಯಸ್‌ ಫಸ್ಟ್‌ ಅಪೀಲ್) ಅನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ.ವೀರಪ್ಪ ಹಾಗೂ ನ್ಯಾಯಮೂರ್ತಿ ಕೆ.ಎಸ್‌.ಹೇಮಲೇಖಾ ಅವರಿದ್ದ ವಿಭಾಗೀಯ ನ್ಯಾಯಪೀಠವು ವಜಾಗೊಳಿಸಿ ಆದೇಶಿಸಿದೆ.

’ಅರ್ಜಿದಾರ ತಾಯಿಯು, ದಂಡದ ಹಣವನ್ನು ನಾಲ್ಕು ವಾರಗಳ ಒಳಗಾಗಿ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಪಾವತಿಸಬೇಕು. ತಪ್ಪಿದರೆ ಮಹಿಳೆಯ ವಿರುದ್ಧ ಪ್ರಾಧಿಕಾರವು ನ್ಯಾಯಾಂಗ ನಿಂದನೆ ಪ್ರಕ್ರಿಯೆ ಆರಂಭಿಸಬಹುದು‘ ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ತಿಳಿಸಿದೆ.

ADVERTISEMENT

‘ಮಗು ಎಂದರೆ ಚರಾಸ್ತಿಯಲ್ಲ. ಹಾಗೇನಾದರೂ ಒಂದು ವೇಳೆ ತಂದೆ-ತಾಯಿ ಆ ರೀತಿ ಭಾವಿಸಿ, ವರ್ತಿಸಿದ್ದೇ ಆದರೆ ಅದು ಸಂವಿಧಾನಾತ್ಮಕವಾಗಿ ಕೊಡಮಾಡಿದ 21ನೇ ವಿಧಿಯ ಅನುಸಾರ ಮಗುವಿನ ಹಕ್ಕಿನ ಉಲ್ಲಂಘನೆಯಾಗುತ್ತದೆ’ ಎಂದು ಅಭಿಪ್ರಾಯಪಟ್ಟಿದೆ.

‘ಮಗು ವಾಸವಿಲ್ಲದ ವ್ಯಾಪ್ತಿಯ ಜಿಲ್ಲಾ ನ್ಯಾಯಾಲಯಕ್ಕೆ ಮಗುವಿನ ಸುಪರ್ದಿ ವಿಚಾರ ತೀರ್ಮಾನಿಸುವ ಅಧಿಕಾರ ಇರುವುದಿಲ್ಲ’ ಎಂದೂ ನ್ಯಾಯಪೀಠ ಸ್ಪಷ್ಟಪಡಿಸಿದೆ.

ಪ್ರಕರಣವೇನು?: ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಸೇರಿದ ಸಾಫ್ಟ್‌ವೇರ್‌ ಉದ್ಯೋಗಿ ದಂಪತಿ 2008ರ ನವೆಂ
ಬರ್ 30ರಂದು ಮದುವೆಯಾಗಿ ಕೆನಡಾಕ್ಕೆ ತೆರಳಿದ್ದರು. 2011ರ ಡಿಸೆಂಬರ್ 11ರಂದು ಕೆನಡಾದಲ್ಲಿ ದಂಪತಿಗೆ ಹೆಣ್ಣು ಮಗು ಜನಿಸಿತ್ತು.

ಇಬ್ಬರ ನಡುವಿನ ವೈಮನಸ್ಯದಿಂದ ದಾಂಪತ್ಯದಲ್ಲಿ ಬಿರುಕು ಉಂಟಾಗಿತ್ತು. ಇದರಿಂದಾಗಿ ಭಾರತಕ್ಕೆ ಮರಳಿ ಬೆಂಗಳೂರಿನಲ್ಲೇ ನೆಲೆಸಿರುವ ಮಗುವಿನ ತಾಯಿ ಇಲ್ಲಿನ ಕೌಟುಂಬಿಕ ನ್ಯಾಯಾಲಯದಲ್ಲಿ ಮಗುವಿನ ಕಸ್ಟಡಿಗೆ ಕೋರಿ ಅರ್ಜಿ ಸಲ್ಲಿಸಿದ್ದರು.

ಈ ಅರ್ಜಿ ವಿಚಾರಣೆ ನಡೆಸಿದ್ದ ಬೆಂಗಳೂರಿನ 1ನೇ ಹೆಚ್ಚುವರಿ ಕೌಟುಂಬಿಕ ನ್ಯಾಯಾಲಯ, ‘ಮಗು ಕೆನಡಾದ ಪೌರತ್ವ ಪಡೆದಿದೆ. ಆದ ಕಾರಣ ಅದರ ಸುಪರ್ದಿ ವಿಚಾರವನ್ನು ತಿರ್ಮಾನಿಸುವ ಅಧಿಕಾರ ವ್ಯಾಪ್ತಿ ತನಗಿಲ್ಲ’ ಎಂದು 2021ರ ಫೆಬ್ರುವರಿ 4ರಂದು ವಜಾಗೊಳಿಸಿತ್ತು.ಈ ಆದೇಶವನ್ನು ಪ್ರಶ್ನಿಸಿ ತಾಯಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.