ADVERTISEMENT

ದಿನಕ್ಕೆ ₹5 ಲಕ್ಷ ದಂಡದ ಎಚ್ಚರಿಕೆ ನೀಡಿದ ಹೈಕೋರ್ಟ್‌

ಬಿಬಿಎಂಪಿ ವಾರ್ಡ್‌ ಮರುವಿಂಗಡಣೆ–ಮೀಸಲು ಪಟ್ಟಿ ಸಲ್ಲಿಸಲು 31ರ ಗಡುವು

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2020, 22:34 IST
Last Updated 13 ಮಾರ್ಚ್ 2020, 22:34 IST
   

ಬೆಂಗಳೂರು: ‘ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯು (ಬಿಬಿಎಂಪಿ) ವಾರ್ಡ್ ಪುನರ್ ವಿಂಗಡಣೆ ಹಾಗೂ ಮೀಸಲು ಪಟ್ಟಿಯನ್ನು ಇದೇ 31ರೊಳಗೆ ಒದಗಿಸದೇ ಹೋದರೆ ಚುನಾವಣಾ ಆಯೋಗಕ್ಕೆ ದಿನಕ್ಕೆ ₹ 5 ಲಕ್ಷ ದಂಡ ಕಟ್ಟಬೇಕಾಗುತ್ತದೆ’ ಎಂದು ಹೈಕೋರ್ಟ್, ರಾಜ್ಯ ಸರ್ಕಾರಕ್ಕೆ ಎಚ್ಚರಿಸಿದೆ.

‘ಬಿಬಿಎಂಪಿಗೆ ಸಕಾಲಕ್ಕೆ ಚುನಾವಣೆ ನಡೆಸಲು ಅನುವಾಗುವಂತೆ ವಾರ್ಡ್ ಪುನರ್ ವಿಂಗಡಣೆ ಮತ್ತು ಮೀಸಲು ಪಟ್ಟಿ ನೀಡಲು ನಿರ್ದೇಶಿಸಬೇಕು’ ಎಂದು ಕೋರಿ ರಾಜ್ಯ ಚುನಾವಣಾ ಆಯೋಗ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಅಭಯ್‌ ಎಸ್‌.ಓಕಾ ಹಾಗೂ ನ್ಯಾಯಮೂರ್ತಿ ಅಶೋಕ್‌ ಎಸ್.ಕಿಣಗಿ ನೇತೃತ್ವದ ವಿಭಾಗೀಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು.

ಸರ್ಕಾರದ ಪರ ವಕೀಲ ವಿ.ಶ್ರೀನಿಧಿ, ‘ವಾರ್ಡ್‌ಗಳ ಪುನರ್ ವಿಂಗಡಣೆ ಕುರಿತ ಕರಡು ಅಧಿಸೂಚನೆಯನ್ನು ಇದೇ 3ರಂದು ಪ್ರಕಟಿಸಲಾಗಿದೆ. ಆಕ್ಷೇಪಣೆ ಸಲ್ಲಿಸಲು 15 ದಿನಗಳ ಕಾಲಾವಕಾಶ ನೀಡಲಾಗಿದೆ. ನಂತರ ವಾರ್ಡ್ ಪುನರ್ ವಿಂಗಡಿಸಿ ವಾರ್ಡ್‌ವಾರು ಮೀಸಲು ಪಟ್ಟಿ ಪ್ರಕಟಿಸಲು ಕ್ರಮ ಜರುಗಿಸಲಾಗುವುದು’ ಎಂದರು.

ADVERTISEMENT

ವಿಚಾರಣೆ ವೇಳೆ ಚುನಾವಣಾ ಆಯೋಗದ ಪರ ವಾದ ಮಂಡಿಸಿದ ಹಿರಿಯ ವಕೀಲ ಕೆ.ಎನ್. ಫಣೀಂದ್ರ, ‘ಯಾವಾಗ ಮೀಸಲು ನಿಗದಿ ಮಾಡಿಕೊಡುತ್ತೇವೆ ಎಂಬ ಬಗ್ಗೆ ಸರ್ಕಾರ ಉತ್ತರ ನೀಡುತ್ತಿಲ್ಲ. ವಾರ್ಡ್ ಪುನರ್ ವಿಂಗಡಣೆ ಜೊತೆಗೆ ಮೀಸಲು ಪಟ್ಟಿಯನ್ನೂ ನೀಡದೇ ಹೋದರೆ, ಸಕಾಲದಲ್ಲಿ ಚುನಾವಣೆ ನಡೆಸಲು ಸಾಧ್ಯವಿಲ್ಲ’ ಎಂದು ತಿಳಿಸಿದರು.

‘ಮುಂದಿನ ಪ್ರಕ್ರಿಯೆಗಳ ಬಗ್ಗೆ ನಿಖರವಾಗಿ ತಿಳಿಸಲು ಒಂದು ವಾರ ಕಾಲಾವಕಾಶಬೇಕು’ ಎಂದು ಕೋರಿದರು. ಇದಕ್ಕೆ ನ್ಯಾಯಪೀಠ, ‘ಚುನಾವಣಾ ಆಯೋಗವು ಸರ್ಕಾರದ ವಿರುದ್ಧವೇ ಕೋರ್ಟ್‌ ಮೆಟ್ಟಿಲೇರಿರುವುದು ದುರದೃಷ್ಟಕರ. ಅಂತೆಯೇ ಮತ್ತೆ ಮತ್ತೆ ಸಮಯ ಕೇಳುತ್ತಿದೆ. ರಾಜ್ಯ ಸರ್ಕಾರಕ್ಕೆ ದಂಡ ವಿಧಿಸಲು ಇದು ಸರಿಯಾದ ಪ್ರಕರಣ’ ಎಂದು ವಿಚಾರಣೆಯನ್ನು ಇದೇ 20ಕ್ಕೆ ಮುಂದೂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.