ಹೈಕೋರ್ಟ್ ಹಾಗೂ ನ್ಯಾ. ನಾಗಪ್ರಸನ್ನ
ಬೆಂಗಳೂರು: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿರುವ (ಕೆಐಎಎಲ್) ರಾಮೇಶ್ವರಂ ಕೆಫೆಯಲ್ಲಿ ಕಲುಷಿತ ಆಹಾರ ಪೂರೈಸಿದ ಆರೋಪದಡಿ ಕೆಫೆಯ ಪ್ರಮುಖರ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಪ್ರಕರಣಕ್ಕೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ.
‘ನಮ್ಮ ವಿರುದ್ಧ ಕೆಐಎಎಲ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣ ರದ್ದುಪಡಿಸಬೇಕು’ ಎಂದು ಕೋರಿ ರಾಮೇಶ್ವರಂ ಕೆಫೆಯ ಬಿ.ಎಲ್.ಸುಮಂತ್, ಕೆಫೆಯ ಮಾತೃ ಸಂಸ್ಥೆ ಅಲ್ಟ್ರಾನ್ ವೆಂಚರ್ಸ್ ಪ್ರೈವೇಟ್ ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕರಾದ ದಿವ್ಯಾ ಮತ್ತು ರಾಘವೇಂದ್ರ ರಾವ್ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಮೊಹಮ್ಮದ್ ನವಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಕುರಿತಂತೆ ಆದೇಶಿಸಿದೆ.
‘ಅರ್ಜಿದಾರರಿಗೆ ಕಿರುಕುಳ ನೀಡುವ ಮತ್ತು ಬ್ಲ್ಯಾಕ್ ಮೇಲ್ ಮಾಡುವ ಉದ್ದೇಶದಿಂದ ಮತ್ತು ಪ್ರತೀಕಾರದ ಭಾಗವಾಗಿ ಈ ದೂರು ಸಲ್ಲಿಸಲಾಗಿದೆ. ದೂರಿನ ಅಂಶಗಳಿಗೂ ಅಪರಾಧಕ್ಕೂ ಯಾವುದೇ ಸಂಬಂಧವಿಲ್ಲ. ವಿಸ್ತೃತವಾಗಿ ಪ್ರಕರಣದ ವಿಚಾರಣೆ ನಡೆಸಬೇಕಿದೆ’ ಎಂಬ ಅಭಿಪ್ರಾಯ ವ್ಯಕ್ತಪಡಿಸಿರುವ ನ್ಯಾಯಪೀಠ ಕೆಐಎಎಲ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣಕ್ಕೆ ತಡೆ ನೀಡಿ ಆದೇಶಿಸಿದೆ.
ಪ್ರತಿವಾದಿ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಲು ಆದೇಶಿಸಿರುವ ನ್ಯಾಯಪೀಠ ವಿಚಾರಣೆ ಮುಂದೂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.