ADVERTISEMENT

ಸಚಿವ ಬೈರತಿ ವಿರುದ್ಧದ ದೋಷಾರೋಪ ಪಟ್ಟಿಗೆ ಹೈಕೋರ್ಟ್ ತಡೆ

ಕಟ್ಟಡದ ಅಗ್ನಿ ಸುರಕ್ಷತಾ ಕ್ರಮ ಉಲ್ಲಂಘನೆ ಆರೋಪ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2023, 0:39 IST
Last Updated 2 ಡಿಸೆಂಬರ್ 2023, 0:39 IST
<div class="paragraphs"><p> ಹೈಕೋರ್ಟ್</p></div>

ಹೈಕೋರ್ಟ್

   

ಬೆಂಗಳೂರು: ಈಗ ಸಚಿವರಾಗಿರುವ ಬೈರತಿ ಸುರೇಶ್ ಒಂಬತ್ತು ವರ್ಷಗಳ ಹಿಂದೆ ಖರೀದಿಸಿದ್ದ ವಾಣಿಜ್ಯ ಕಟ್ಟಡದಲ್ಲಿ ಕರ್ನಾಟಕ ಅಗ್ನಿಶಾಮಕ ದಳ ಕಾಯ್ದೆ-1964ರ ಕಲಂ 13ರಡಿ ಬರುವ ಸುರಕ್ಷತಾ ಕ್ರಮಗಳನ್ನು ಉಲ್ಲಂಘಿಸಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಅವರ ವಿರುದ್ಧ ಸಲ್ಲಿಸಲಾಗಿರುವ ದೋಷಾರೋಪ ಪಟ್ಟಿಗೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ.

ಈ ಸಂಬಂಧ ನಗರದ 10ನೇ ಎಸಿಎಂಎಂ ಕೋರ್ಟ್‌ನಲ್ಲಿ ನಡೆಯುತ್ತಿರುವ ವಿಚಾರಣೆ ರದ್ದುಪಡಿಸಬೇಕು ಎಂದು ಕೋರಿ ಬಿ.ಎಸ್. ಸುರೇಶ್ (ಬೈರತಿ ಸುರೇಶ್) ಸಲ್ಲಿಸಿರುವ ಕ್ರಿಮಿನಲ್ ಅರ್ಜಿಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು.

ADVERTISEMENT

ಅರ್ಜಿದಾರರ ಪರ ವಕೀಲೆ ಲೀಲಾ ಪಿ.ದೇವಾಡಿಗ ಅವರ ವಾದ ಆಲಿಸಿದ ನ್ಯಾಯಪೀಠ, ಬೈರತಿ ಸುರೇಶ್ ಹಾಗೂ ಇತರರ ವಿರುದ್ಧ ಇಂದಿರಾನಗರ ಪೊಲೀಸರು 10ನೇ ಎಸಿಎಂಎಂ ಕೋರ್ಟ್‌ಗೆ ಸಲ್ಲಿಸಿರುವ ದೋಷಾರೋಪ ಪಟ್ಟಿಗೆ ಮಧ್ಯಂತರ ತಡೆ ನೀಡಿ ವಿಚಾರಣೆಯನ್ನು ಇದೇ 15ಕ್ಕೆ ಮುಂದೂಡಿತು.

‘ಅತಿ ಎತ್ತರದ ಕಟ್ಟಡಗಳಿಗೆ ಅಳವಡಿಸಬೇಕಾದ ಅಗ್ನಿ ಸುರಕ್ಷತಾ ಕ್ರಮಗಳನ್ನು ಅನುಸರಿಸಲಾಗಿಲ್ಲ’ ಎಂಬುದು ಅರ್ಜಿದಾರರ ವಿರುದ್ಧದ ಆರೋಪ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.