ADVERTISEMENT

ವಕ್ಫ್‌ ಮಂಡಳಿ: ನಾಮನಿರ್ದೇಶನಕ್ಕೆ ತಕರಾರು

ಅಂತಿಮ ಹಂತದಲ್ಲಿ ರಿಟ್‌ ಅರ್ಜಿ ವಿಚಾರಣೆ

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2018, 18:53 IST
Last Updated 12 ನವೆಂಬರ್ 2018, 18:53 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು: ರಾಜ್ಯ ವಕ್ಫ್‌ ಮಂಡಳಿಗೆ ನಾಮ ನಿರ್ದೇಶನಗೊಂಡಿರುವ ನಗರದ ವಕೀಲ ಅಬ್ದುಲ್‌ ರಿಯಾಜ್‌ ಖಾನ್‌ ಅವರನ್ನು, ರಾಜ್ಯ ವಕೀಲರ ಪರಿಷತ್‌ ಕೋಟಾದಡಿ ಪರಿಗಣಿಸಿರುವ ಕಂದಾಯ ಇಲಾಖೆಯ ಆದೇಶವನ್ನು ಈಗ ಹೈಕೋರ್ಟ್‌ನಲ್ಲಿ ಪ್ರಶ್ನಿಸಲಾಗಿದೆ.

ಈ ಕುರಿತಂತೆ ಕೊಪ್ಪಳದ ವಕೀಲ ಅಸೀಫ್‌ ಅಲಿ ಶೇಖ್‌ ಹುಸೇನ್‌ ಅವರು ಸಲ್ಲಿಸಿರುವ ರಿಟ್ ಅರ್ಜಿ, ನ್ಯಾಯಮೂರ್ತಿ ಬಿ.ವೀರಪ್ಪ ಅವರಿದ್ದ ಏಕಸದಸ್ಯ ನ್ಯಾಯಪೀಠದ ಮುಂದೆ ಅಂತಿಮ ಹಂತದ ವಿಚಾರಣೆಗೆ ಕಾಯುತ್ತಿದೆ.

ಪ್ರಕರಣವೇನು?: ತಿದ್ದುಪಡಿಗೊಂಡ ವಕ್ಫ್‌ ಕಾಯ್ದೆ ಅನುಸಾರ, ವಕ್ಫ್ ಮಂಡಳಿಗೆ ನಾಮ ನಿರ್ದೇಶನಗೊಳ್ಳುವ ರಾಜ್ಯ ವಕೀಲರ ಪರಿಷತ್‌ ಸದಸ್ಯರು ಹಾಲಿ ಸದಸ್ಯತ್ವ ಹೊಂದಿರಬೇಕು. ತಿದ್ದುಪಡಿಗೂ ಮುನ್ನ ಇದ್ದ ಅಂಶದ ಪ್ರಕಾರ, ಹಾಲಿ ಸದಸ್ಯರು ಇರದೇ ಹೋದರೆ ಮಾಜಿ ಸದಸ್ಯರನ್ನೇ ಪರಿಗಣಿಸಲಾಗುತ್ತಿತ್ತು.

ADVERTISEMENT

ಅಬ್ದುಲ್‌ ರಿಯಾಜ್‌ ಖಾನ್‌ ಅವರು, ಈ ಹಿಂದಿನ ಪರಿಷತ್‌ ಸದಸ್ಯರಾಗಿದ್ದವರು. ಹಾಲಿ ಸದಸ್ಯರನ್ನು ಪರಿಗಣಿಸಬೇಕಾದರೆ, 2017ರ ಮಾರ್ಚ್‌ 27ರಂದು ರಾಜ್ಯ ವಕೀಲರ ಪರಿಷತ್‌ಗೆ ನಡೆದ ಚುನಾವಣೆಯಲ್ಲಿ ಆಯ್ಕೆಯಾಗಿರುವ ರಿಯಾಜ್‌ ಖಾನ್‌ ನಾಮ ನಿರ್ದೇಶನ ಆಗಬೇಕಿತ್ತು. ಆದರೆ, ಪರಿಷತ್‌ ಚುನಾಯಿತ ಪ್ರತಿನಿಧಿಗಳ ಆಯ್ಕೆ ಬಗ್ಗೆ ಚುನಾವಣಾ ತಕರಾರು ದೆಹಲಿಯ ಪರಿಷತ್‌ ನ್ಯಾಯಮಂಡಳಿ ಮುಂದೆ ವಿಚಾರಣೆ ಹಂತದಲ್ಲಿದೆ. ಹೀಗಾಗಿ ಅಧಿಕೃತ ಅಧಿಸೂಚನೆ ಇನ್ನೂ ಹೊರಬಿದ್ದಿಲ್ಲ.

ಒಂದು ವೇಳೆ ನ್ಯಾಯಮಂಡಳಿಯಲ್ಲಿ ಪ್ರಕರಣ ಇತ್ಯರ್ಥಗೊಂಡು ಅಂತಿಮ ಅಧಿಸೂಚನೆ ಪ್ರಕಟಗೊಂಡರೆ ಅಸೀಫ್‌ ಅಲಿ ಶೇಖ್‌ ಹುಸೇನ್‌ ವಕ್ಫ್‌ ಮಂಡಳಿಗೆ ನಾಮ ನಿರ್ದೇಶನ ಹೊಂದಬೇಕಾಗುತ್ತದೆ. ಆದರೆ, ಅಂತಿಮ ಅಧಿಸೂಚನೆ ಹೊರಬಿದ್ದಿಲ್ಲ ಎಂಬ ಕಾರಣಕ್ಕಾಗಿ ಅಬ್ದುಲ್‌ ರಿಯಾಜ್‌ ಖಾನ್‌ ನಾಮ ನಿರ್ದೇಶನಗೊಂಡಿದ್ದಾರೆ. ಇವರು ಈ ಹಿಂದಿನ ಪರಿಷತ್‌ನಲ್ಲಿ ಆಯ್ಕೆಯಾಗಿದ್ದವರು.

ಕಂದಾಯಾಧಿಕಾರಿ ಆದೇಶಕ್ಕೆ ಆಕ್ಷೇಪ: ‘ವಕ್ಫ್ ತಿದ್ದುಪಡಿ ಕಾಯ್ದೆಯ ಅನುಸಾರ ಮಾಜಿ ಸದಸ್ಯರನ್ನು ನಾಮ ನಿರ್ದೇಶನ ಮಾಡುವಂತಿಲ್ಲ. ಒಂದು ವೇಳೆ ಹಾಲಿ ಸದಸ್ಯರು ಇಲ್ಲದೇ ಹೋದರೆ ಅಂತಹ ಜಾಗಕ್ಕೆ ಹೈಕೋರ್ಟ್‌ನ ಹಿರಿಯ ವಕೀಲರನ್ನು ಪರಿಗಣಿಸಬೇಕು. ಆದರೆ, ಬೆಂಗಳೂರು ವಿಭಾಗದ ಕಂದಾಯ ಇಲಾಖೆಯ ಪ್ರಾದೇಶಿಕ ಆಯುಕ್ತರು ತಿದ್ದುಪಡಿ ಕಾಯ್ದೆಯ ಈ ಅಂಶವನ್ನು ಪಾಲನೆ ಮಾಡಿಲ್ಲ’ ಎಂಬುದು ಅರ್ಜಿದಾರರ ಆಕ್ಷೇಪವಾಗಿದೆ.

‘ಕಾನೂನು ಬಾಹಿರವಾಗುತ್ತದೆ’

‘ಅಸೀಫ್‌ ಅಲಿ ಶೇಖ್‌ ಹುಸೇನ್‌ ಅವರ ಆಯ್ಕೆ ಬಗ್ಗೆ ವಕೀಲರ ಪರಿಷತ್‌ ಅಧಿಸೂಚನೆ ಹೊರಡಿಸಿದರೂ ಅದರ ಪರಿಗಣನೆ ಕಾನೂನು ಬಾಹಿರವಾಗುತ್ತದೆ’ ಎಂಬುದು ಅಬ್ದುಲ್‌ ರಿಯಾಜ್‌ ಖಾನ್‌ ಪರ ವಕೀಲರ ವಾದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.