ADVERTISEMENT

ಅಧ್ಯಯನ ಪೀಠಗಳಲ್ಲಿ ನಡೆಯದ ಸಂಶೋಧನೆ: ಡಾ.ಎಂ.ಸಿ.ಸುಧಾಕರ ಬೇಸರ

ನಿಡುಮಾಮಿಡಿ ಮಠದಲ್ಲಿ ಜಚನಿ ಅಧ್ಯಯನ ಪೀಠ ಮತ್ತು ಸಂಶೋಧನ ಸಂಸ್ಥೆ ಆರಂಭ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2025, 14:06 IST
Last Updated 26 ಅಕ್ಟೋಬರ್ 2025, 14:06 IST
ಡಾ.ಎಂ.ಸಿ.ಸುಧಾಕರ
ಡಾ.ಎಂ.ಸಿ.ಸುಧಾಕರ   

ಬೆಂಗಳೂರು: ‘ರಾಜ್ಯದ ವಿಶ್ವವಿದ್ಯಾನಿಲಯಗಳಲ್ಲಿರುವ ಅಧ್ಯಯನ ಪೀಠಗಳಲ್ಲಿ ನಿರೀಕ್ಷಿತ ಮಟ್ಟದ ಸಂಶೋಧನೆಗಳು ನಡೆಯುತ್ತಿಲ್ಲ. ಕಾರ್ಯ ಚಟುವಟಿಕೆ ಇರಲಿ, ಬೀಗವನ್ನೇ ತೆಗೆಯದೇ ಹಲವು ಅಧ್ಯಯನ ಕೇಂದ್ರಗಳು ಧೂಳಿನಲ್ಲಿ ಮುಳುಗಿವೆ’ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ ಬೇಸರ ವ್ಯಕ್ತಪಡಿಸಿದರು.

ನಗರದ ಬಸವನಗುಡಿಯ ನಿಡುಮಾಮಿಡಿ ಮಠದಲ್ಲಿ ಜಚನಿ ಅಧ್ಯಯನ ಪೀಠ ಮತ್ತು ಸಂಶೋಧನಾ ಸಂಸ್ಥೆಯನ್ನು ಭಾನುವಾರ ಉದ್ಘಾಟಿಸಿ ಮಾತನಾಡಿದ ಅವರು, ‘ಅಧ್ಯಯನ ಪೀಠಗಳು ಬೇಕೇ ಬೇಕು ಎಂದು ಒತ್ತಡ ಹಾಕಿ ಅನುಮತಿ ಪಡೆಯುತ್ತಾರೆ. ಸರ್ಕಾರವೂ ವರ್ಷಕ್ಕೆ ₹ 2 ಲಕ್ಷ ದಿಂದ ₹40 ಲಕ್ಷವರೆಗೂ ಆರ್ಥಿಕ ನೆರವು ನೀಡುತ್ತದೆ. ಆರಂಭದಲ್ಲಿ ಇದ್ದ ಕಳಕಳಿ ಕಾಣೆಯಾಗಿ ಪೀಠಗಳು ಕೆಲಸವನ್ನೇ ಮಾಡದ ಸನ್ನಿವೇಶ ನಿರ್ಮಾಣವಾಗಿದೆ. ಇದು ಒಳ್ಳೆಯ ಬೆಳವಣಿಗೆಯಲ್ಲ’ ಎಂದು ಹೇಳಿದರು.

‘ಸಂಶೋಧನಾ ಕ್ಷೇತ್ರದ ತಜ್ಞರನ್ನೊಳಗೊಂಡ ಸಮಿತಿ ರಚಿಸಿ ನಿಯಮಿತವಾಗಿ ಚಟುವಟಿಕೆ ನಡೆಸಿದರೆ ಹೀಗೆ ಆಗುವುದಿಲ್ಲ. ಸಮಾಜದಲ್ಲಿ ದಶಕಗಳ ಹಿಂದೆಯೇ ಬದಲಾವಣೆಗೆ ನಾಂದಿ ಹಾಡಿದ ಜಚನಿ ಅವರ ಹೆಸರಲ್ಲಿ ಸಂಶೋಧನಾ ಸಂಸ್ಥೆ ಆರಂಭಿಸುತ್ತಿರುವುದು, ತಜ್ಞರ ಸಲಹಾ ಸಮಿತಿ ರಚಿಸಿರುವುದನ್ನು ನೋಡಿದರೆ ಒಳ್ಳೆಯ ಕೆಲಸ ಆಗುವ ವಿಶ್ವಾಸವಿದೆ’ ಎಂದು ತಿಳಿಸಿದರು.

ADVERTISEMENT

‘ಕರ್ನಾಟಕದಲ್ಲಿ ಸಾಂಪ್ರದಾಯಿಕ ವಿಶ್ವವಿದ್ಯಾಲಯಗಳ ಜತೆಗೆ ಕನ್ನಡ, ಸಂಸ್ಕೃತ, ಜನಪದ, ಸಂಗೀತ ವಿಶ್ವವಿದ್ಯಾಲಯಗಳಿಗೆ ಸರ್ಕಾರ ₹2 ಕೋಟಿ ವಿಶೇಷ ಅನುದಾನ ನೀಡಲಾಗುತ್ತಿದೆ. ‌ಇದರಿಂದ ಇಲ್ಲಿ ಕಾರ್ಯಚಟುವಟಿಕೆ ವಿಸ್ತರಿಸಲು ಸಹಕಾರಿಯಾಗಿದೆ’ ಎಂದರು.

‘ನೀತಿ ಆಯೋಗದ ಸಮೀಕ್ಷೆ ಪ್ರಕಾರ ಕರ್ನಾಟಕದಲ್ಲಿ ಕಾಲೇಜುಗಳ ಸಂಖ್ಯೆ ಹೆಚ್ಚಿದ್ದರೂ ವಿದ್ಯಾರ್ಥಿಗಳ ಪ್ರವೇಶ ಪ್ರಮಾಣದಲ್ಲಿ ತಮಿಳುನಾಡು ಹಾಗೂ ಕೇರಳಕ್ಕಿಂತ ಹಿಂದಿದೆ. ಮಠ– ಮಾನ್ಯಗಳು, ಸಂಘಗಳೂ ಕೂಡ ಶಿಕ್ಷಣ ಸಂಸ್ಥೆ ಆರಂಭಿಸಿ ಉನ್ನತ ಶಿಕ್ಷಣಕ್ಕೆ ಒತ್ತು ನೀಡುತ್ತಿದ್ದು, ಈ ಕ್ಷೇತ್ರದಲ್ಲಿ ಬಂಡವಾಳ ಹೂಡಿಕೆಗೆ ಅವಕಾಶಗಳಾಗಿವೆ. ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯುವ ಪ್ರಮಾಣದಲ್ಲೂ ಏರಿಕೆಯಾಗಬೇಕಿದೆ’ ಎಂದು ಹೇಳಿದರು. 

ಆಶಯ ಭಾಷಣ ಮಾಡಿದ ಹಂಪಿ ಕನ್ನಡ ವಿಶ್ವವಿದ್ಯಾಲಯ ಕುಲಪತಿ ಡಿ.ವಿ.ಪರಶಿವಮೂರ್ತಿ, ‘ಸರ್ಕಾರವು ಬಡ್ತಿಗೆ ಪಿಎಚ್‌.ಡಿ ಪದವಿಯನ್ನು ಕಡ್ಡಾಯಗೊಳಿಸಿದ ಮೇಲೆ ಸಂಶೋಧನಾ ಗುಣಮಟ್ಟ ಕುಸಿದಿದೆ. ವೇತನ ಹೆಚ್ಚಳಕ್ಕಾಗಿ ಪ್ರಮಾಣ ಪತ್ರ ಪಡೆಯಲೆಂದು ಸಂಶೋಧನೆ ಮಾಡುವವರ ಪ್ರಮಾಣ ಹೆಚ್ಚಾಗಿದೆ. ಆದರೆ ಕನ್ನಡ ವಿಶ್ವವಿದ್ಯಾಲಯ ಮಾತ್ರ ಯುಜಿಸಿಗಿಂತಲೂ ಬಿಗಿ ನಿಯಮ ಜಾರಿಗೊಳಿಸಿ ಅನುಷ್ಠಾನಗೊಳಿಸುತ್ತಿದೆ. ಇದರಿಂದ ನಮ್ಮಲ್ಲಿ ವರ್ಷಕ್ಕೆ 100ಕ್ಕೂ ಹೆಚ್ಚು ಸಂಶೋಧಕರು ಗುಣಾತ್ಮಕವಾಗಿಯೇ ಪಿಎಚ್‌.ಡಿ ಪೂರ್ಣಗೊಳಿಸುತ್ತಿದ್ದಾರೆ’ ಎಂದು ಹೇಳಿದರು.

‌‌‌ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್‌ ಅವರು ಶಿವಸಾಹಿತ್ಯ ಸೂರ್ಯ ಶ್ರೀ ಜಚನಿ ಪುಸ್ತಕ ಜನಾರ್ಪಣೆಗೊಳಿಸಿದರು‌.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.