ADVERTISEMENT

ಬಿಸಿಗಾಳಿ: ವಾಡಿಕೆಗಿಂತ ಅಧಿಕ ಉಷ್ಣಾಂಶ: ಐಎಂಡಿ

ಏಪ್ರಿಲ್–ಜೂನ್ ಅವಧಿಯಲ್ಲಿ ಹೆಚ್ಚು ಬಿಸಿಗಾಳಿ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2023, 20:01 IST
Last Updated 1 ಏಪ್ರಿಲ್ 2023, 20:01 IST
   

ನವದೆಹಲಿ (ಪಿಟಿಐ): ದೇಶದ ಬಹುತೇಕ ಭಾಗದಲ್ಲಿ ಏಪ್ರಿಲ್–ಜೂನ್ ಅವಧಿಯ ಗರಿಷ್ಠ ಉಷ್ಣಾಂಶವು ವಾಡಿಕೆಗಿಂತ ಅಧಿಕವಾಗಿ ಇರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ. ಈ ಅವಧಿಯಲ್ಲಿ ದೇಶದ ಕೇಂದ್ರ ಭಾಗ, ವಾಯವ್ಯ ಹಾಗೂ ಪೂರ್ವ ಭಾಗದ ಬಹುತೇಕ ಕಡೆಗಳಲ್ಲಿ ಬಿಸಿಗಾಳಿಯ ದಿನಗಳು ವಾಡಿಕೆ ಗಿಂತ ಹೆಚ್ಚಿರಲಿವೆ ಎಂದು ತಿಳಿಸಿದೆ.

ದಕ್ಷಿಣ ಭಾರತ ಹಾಗೂ ವಾಯವ್ಯ ಭಾಗದ ಕೆಲವು ಪ್ರದೇಶಗಳಲ್ಲಿ ವಾಡಿಕೆಯಷ್ಟು ಅಥವಾ ವಾಡಿಕೆಗಿಂತ ಕಡಿಮೆ ಉಷ್ಣಾಂಶ ಇರುವ ಸಾಧ್ಯತೆಯಿದೆ ಎಂದು ತಿಳಿಸಿದೆ.

‘ಬಿಹಾರ, ಜಾರ್ಖಂಡ್, ಉತ್ತರ ಪ್ರದೇಶ, ಒಡಿಶಾ, ಪಶ್ಚಿಮ ಬಂಗಾಳ, ಛತ್ತೀಸಗಡ, ಮಹಾರಾಷ್ಟ್ರ, ಗುಜರಾತ್, ಪಂಜಾಬ್, ಹರಿಯಾಣ ರಾಜ್ಯಗಳ ಕೆಲವು ಭಾಗಗಳಲ್ಲಿ ಬಿಸಿಗಾಳಿಯ ದಿನಗಳು ಅಧಿಕವಾಗಲಿವೆ ಎಂದು ಇಲಾಖೆ ಮಹಾನಿರ್ದೇಶಕ ಮೃತ್ಯಂಜಯ ಮಹಾಪಾತ್ರ ತಿಳಿಸಿದ್ದಾರೆ.

ADVERTISEMENT

2023ರ ಫೆಬ್ರುವರಿ ತಿಂಗಳಲ್ಲಿ ವಾಡಿಕೆಗಿಂತ ಅತ್ಯಧಿಕ ಉಷ್ಣಾಂಶ ದಾಖಲಾಗಿತ್ತು. ಆದರೆ ಮಾರ್ಚ್‌ನಲ್ಲಿ (29.9 ಮಿ.ಮೀ.) ತುಸು ಹೆಚ್ಚು ಮಳೆಯಾಗಿದ್ದರಿಂದ ತಾಪ ಕಡಿಮೆಯಿತ್ತು. ಆದರೆ 2022ರ ಮಾರ್ಚ್‌ನಲ್ಲಿ ವಾಡಿಕೆಗಿಂತ ಹೆಚ್ಚು ಬಿಸಿಲು ಇತ್ತು ಎಂದು ಇಲಾಖೆ ತಿಳಿಸಿದೆ.

ಇದೇ ಏಪ್ರಿಲ್‌ನಲ್ಲಿ ವಾಡಿಕೆಯ (39.2 ಮಿ.ಮೀ.) ಮಳೆಯಾಗಲಿದೆ. ವಾಯವ್ಯ, ಕೇಂದ್ರ ಹಾಗೂ ಪರ್ಯಾಯ ದ್ವೀಪದ ಕೆಲವು ಭಾಗಗಳಲ್ಲಿ ತುಸು ಹೆಚ್ಚು ಮಳೆಯಾಗಲಿದೆ ಎಂದು ಇಲಾಖೆ ಮುನ್ಸೂಚನೆ ನೀಡಿದೆ. ಮುಂಗಾರು ಪೂರ್ವ ಅಧಿಕ ಮಳೆಯಿಂದಾಗಿ ಉತ್ತರ ಪ್ರದೇಶ, ಪಂಜಾಬ್, ಮಹಾರಾಷ್ಟ್ರದ ಕೆಲವೆಡೆ ಬೆಳೆ ನಾಶವಾಗಿದೆ.

ಅಕಾಲಿಕ ಮಳೆ ಹಾಗೂ ಗಾಳಿಯಿಂದ ದೇಶದಲ್ಲಿ ಶೇ 20ರಷ್ಟು ಮಾವಿನ ಫಸಲಿಗೆ ಹಾನಿಯಾಗಿದೆ ಎಂದು ಐಸಿಎಆರ್ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.