ADVERTISEMENT

‘ನಾಯಕ’ ಮೀಸಲು ಏರಿಕೆ: ವಿಚಾರಣೆ ಮುಂದಕ್ಕೆ

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಟ್ರಸ್ಟ್‌ನಿಂದ ಪಿಐಎಲ್‌

​ಪ್ರಜಾವಾಣಿ ವಾರ್ತೆ
Published 1 ಜುಲೈ 2019, 20:04 IST
Last Updated 1 ಜುಲೈ 2019, 20:04 IST
   

ಬೆಂಗಳೂರು: ‘ರಾಜ್ಯ ಸರ್ಕಾರದ ಉದ್ಯೋಗ ಮತ್ತು ಉನ್ನತ ಶಿಕ್ಷಣದಲ್ಲಿ ಪರಿಶಿಷ್ಟ ಪಂಗಡದ (ಎಸ್‌.ಟಿ) ಮೀಸಲು ಪ್ರಮಾಣವನ್ನು ಶೇ 3ರಿಂದ ಶೇ7ಕ್ಕೆ ಏರಿಸುವಂತೆ ಕೋರಿ ಈ ಹಿಂದಿನ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಅರವಿಂದ ಜಾಧವ್‌ ನೀಡಿರುವ ಆದೇಶವನ್ನು ಅನುಷ್ಠಾನಗೊಳಿಸಬೇಕು’ ಎಂದು ಕೋರಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್‌) ವಿಚಾರಣೆಯನ್ನು ಹೈಕೋರ್ಟ್‌, ಎರಡು ದಿನ ಮುಂದೂಡಿದೆ.

ಈ ಕುರಿತಂತೆ ‘ನಾಯಕ ವಿದ್ಯಾರ್ಥಿ ಓಕ್ಕೂಟ’ದ (ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಟ್ರಸ್ಟ್) ಕಾರ್ಯದರ್ಶಿಯೂ ಆದ ಗೋಕಾಕ್‌ನ ಲಕ್ಷಣರಾವ್ ಜಾರಕಿಹೊಳಿ ಸಲ್ಲಿಸಿರುವ ಪಿಐಎಲ್‌ ಅನ್ನು ಮುಖ್ಯ ನ್ಯಾಯಮೂರ್ತಿ ಅಭಯ್‌ ಎಸ್.ಓಕಾ ಹಾಗೂ ನ್ಯಾಯ
ಮೂರ್ತಿ ಎಚ್.ಟಿ.ನರೇಂದ್ರ ಪ್ರಸಾದ್‌ ಅವರಿದ್ದ ವಿಭಾಗೀಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಸರ್ಕಾರದ ಪರ ವಕೀಲ ಡಿ.ನಾಗರಾಜ್‌ ಅವರು, ‘ಈ ವಿಷಯಕ್ಕೆ ಸಂಬಂಧಿಸಿದಂತೆ ಮುಖ್ಯ ಕಾರ್ಯದರ್ಶಿಯವರ ಜೊತೆ ಇಂದೇ (ಜುಲೈ 1) ಮಾತುಕತೆ ನಿಗದಿಯಾಗಿದೆ. ಅಷ್ಟಕ್ಕೂ ಮೀಸಲು ನಿಗದಿ ವಿಷಯವನ್ನು ಮುಖ್ಯ ಕಾರ್ಯದರ್ಶಿಯೊಬ್ಬರು ನಿರ್ಣಯಿಸಲು ಸಾಧ್ಯವಿಲ್ಲ. ಅವರು, ಕೇವಲ ಆಡಳಿತಾಂಗದ ಮುಖ್ಯಸ್ಥರು ಅಷ್ಟೇ. ವಾಸ್ತವದಲ್ಲಿ ಇದು ಸರ್ಕಾರದ ನೀತಿಗೆ ಸಂಬಂಧಿಸಿದ್ದು ಮತ್ತು ಸಚಿವ ಸಂಪುಟ ಈ ಕುರಿತು ಆಖೈರು ತೀರ್ಮಾನ ಕೈಗೊಳ್ಳಬೇಕು’ ಎಂದು ವಿವರಿಸಿದರು.

ADVERTISEMENT

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ‘ಸರ್ಕಾರಿ ವಕೀಲರ ಆಕ್ಷೇಪಣೆ ಸರಿ ಇದೆ’ ಎಂಬ ಅಭಿಪ್ರಾಯವನ್ನು ಮೌಖಿಕವಾಗಿ ವ್ಯಕ್ತಪಡಿಸಿತಲ್ಲದೇ, ವಿಚಾರಣೆಯನ್ನು ಎರಡು ದಿನ ಮುಂದೂಡಿದೆ. ಅರ್ಜಿದಾರರ ಪರ ವಕೀಲ ಎಚ್‌.ದೇವೇಂದ್ರಪ್ಪ ಹಾಜರಿದ್ದರು.

ಅರ್ಜಿಯಲ್ಲಿ ಏನಿದೆ?: ‘ರಾಜ್ಯ ಸರ್ಕಾರದ ಉದ್ಯೋಗ ಮತ್ತು ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ನಾಯಕ ಸಮುದಾಯಕ್ಕೆ ಮೀಸಲು ಪ್ರಮಾಣವನ್ನು ಶೇ 3ರಿಂದ ಶೇ 7ಕ್ಕೆ ಏರಿಸಬೇಕು ಎಂದು 2014ರ ಜುಲೈ 4ರಂದು ಮನವಿ ಸಲ್ಲಿಸಿದ್ದೆವು. ಆದರೆ, ಸರ್ಕಾರ ಈ ಮನವಿಯನ್ನು ಪರಿಗಣಿಸಿಲ್ಲ. ಆದ್ದರಿಂದ ಇದನ್ನು ಪರಿಗಣಿಸುವಂತೆ ನಿರ್ದೇಶಿಸಬೇಕು’ ಎಂದು ಕೋರಿ ಲಕ್ಷ್ಮಣರಾವ್ ಈ ಮೊದಲು ಹೈಕೋರ್ಟ್‌ಗೆ ಪಿಐಎಲ್‌ ಸಲ್ಲಿಸಿದ್ದರು.

ಇದರ ವಿಚಾರಣೆ ನಡೆಸಿದ್ದ ಅಂದಿನ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಸ್‌.ಕೆ.ಮುಖರ್ಜಿ ನೇತೃತ್ವದ ವಿಭಾಗೀಯ ನ್ಯಾಯಪೀಠವು, 2015ರ ಜುಲೈ 17ರಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ನಿರ್ದೇಶನ ನೀಡಿ ಆದೇಶಿಸಿತ್ತು.

‘ಅಂದಿನ ಮುಖ್ಯ ಕಾರ್ಯದರ್ಶಿ ಅರವಿಂದ ಜಾಧವ್‌ ಅವರು 2016ರ ಆಗಸ್ಟ್‌ 29ರಂದು ನೀಡಿರುವ ಆದೇಶ ಜಾರಿಗೆ ಕೋರಿ ಅರ್ಜಿದಾರರು ಸಲ್ಲಿಸುವ ಮನವಿಯನ್ನು, ಮನವಿ ಸಲ್ಲಿಸಿದ ಆರು ತಿಂಗಳ ಒಳಗಾಗಿ ಅರ್ಜಿದಾರರ ಅಹವಾಲು ಆಲಿಸಿ ಸೂಕ್ತ ನಿರ್ಣಯ ಕೈಗೊಳ್ಳಬೇಕು’ ಎಂದು ಆದೇಶದಲ್ಲಿ ತಿಳಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.