ADVERTISEMENT

ಹಿಂದಿ ಭಾಷೆ ಹೇರಿಕೆ ಖಂಡಿಸಿ ಪ್ರತಿಭಟನೆ

ಕಟೌಟ್ ಕಿತ್ತು ಹಾಕಿದ ಪ್ರಕರಣ: ಬಂಧಿತರ ಬಿಡುಗಡೆಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2019, 19:26 IST
Last Updated 19 ಆಗಸ್ಟ್ 2019, 19:26 IST

ಬೆಂಗಳೂರು: ‘ಹಿಂದಿ’ ಕಟೌಟ್ ಕಿತ್ತು ಹಾಕಿದ ಪ್ರಕರಣದಲ್ಲಿ ಕನ್ನಡ ಹೋರಾಟಗಾರರನ್ನು ಬಂಧಿಸಿದ್ದನ್ನು ಖಂಡಿಸಿ ಪ್ರತಿಭಟನೆ ನಡೆಸಿದ ಕನ್ನಡ ಸಂಘಟನೆಗಳ ಕಾರ್ಯಕರ್ತರು, ‘ಹಿಂದಿ ಹೇರಿಕೆ ವಿರುದ್ಧ ನಮ್ಮ ಹೋರಾಟ ನಿರಂತರ’ ಎಂದು ಘೋಷಿಸಿದರು.

ನಗರದ ಪುರಭವನ ಎದುರು ಸೋಮವಾರ ಸಂಜೆ ಸೇರಿದ್ದ ಕಾರ್ಯಕರ್ತರು, ‘ಬಂಧಿತ ಹೋರಾಟಗಾರರನ್ನು ಕೂಡಲೇ ಬಿಡುಗಡೆ ಮಾಡಬೇಕು. ಅವರ ವಿರುದ್ಧ ದಾಖಲಿಸಿರುವ ಸುಳ್ಳು ಪ್ರಕರಣಗಳನ್ನು ಹಿಂಪಡೆಯಬೇಕು’ ಎಂದು ಮುಖ್ಯಮಂತ್ರಿಯನ್ನು ಒತ್ತಾಯಿಸಿದರು.

‘ಕರ್ನಾಟಕದಲ್ಲಿ ನಾನಾ ರಾಜ್ಯಗಳ ಜನರಿದ್ದಾರೆ. ನಾವು ಯಾವತ್ತೂ ಅವರ ರಾಜ್ಯ ಯಾವುದೆಂದು ಕೇಳಿಲ್ಲ. ಎಲ್ಲ ಸೌಲಭ್ಯಗಳನ್ನೂ ಅವರಿಗೆ ಕೊಟ್ಟಿದ್ದೇವೆ. ಇಂಥ ನಾಡಿನಲ್ಲಿ ಕನ್ನಡ ಹೋರಾಟಗಾರರ ಮನೆಗಳಿಗೆ ಪೊಲೀಸರು ರಾತ್ರೋರಾತ್ರಿ ನುಗ್ಗಿ ಮನೆಯಲ್ಲೆಲ್ಲ ಹುಡುಕಾಡಿ ಎಳೆದೊಯ್ಯುವ ವ್ಯವಸ್ಥೆ ಬಂದಿದೆ. ಇಂಥ ದೌರ್ಜನ್ಯ ಏಕೆ ? ಕನ್ನಡ ಪರ ಹೋರಾಟ ಮಾಡುವುದೇ ತಪ್ಪಾ’ ಎಂದು ಕಾರ್ಯಕರ್ತರು ಪ್ರಶ್ನಿಸಿದರು.

ADVERTISEMENT

‘ರಾಜ್ಯದಲ್ಲಿ ಕನ್ನಡದಲ್ಲೇ ನಾಮಫಲಕ ಇರಬೇಕೆಂಬ ನಿಯಮ ಇದೆ.ಜೈನ್ ಸಮುದಾಯದ ಕಟ್ಟಡದಲ್ಲಿದ್ದ ಹಿಂದಿ ಕಟೌಟ್‌ ಅನ್ನು ಮಾತ್ರ ಕಿತ್ತಿದ್ದಾರೆ. ಅಷ್ಟಕ್ಕೆ ಎಂಟು ಪ್ರಕರಣ ದಾಖಲಿಸಿ, ಅವರನ್ನು ಬಂಧಿಸುವುದು ಸರಿಯಲ್ಲ. ಹಿಂದಿ ಭಾಷೆಯಲ್ಲಿ ಕಟೌಟ್ ಹಾಕಿದ್ದವರ ವಿರುದ್ಧ ಪ್ರಕರಣವನ್ನು ಏಕೆ ದಾಖಲಿಸಿಲ್ಲ’ ಎಂದು ಹೇಳಿದರು.

ಧರ್ಮ, ವ್ಯಕ್ತಿ ವಿರುದ್ಧ ಹೋರಾಟವಲ್ಲ; ‘ಯಾವುದೇ ಧರ್ಮ, ರಾಜಕೀಯ ಪಕ್ಷ, ವ್ಯಕ್ತಿಯ ವಿರುದ್ಧ ನಮ್ಮ ಹೋರಾಟವಲ್ಲ. ಯಾವುದೇ ಸಂಸದ, ಸಚಿವನ ವಿರುದ್ಧವೂ ಅಲ್ಲ. ಹಿಂದಿ ಹೇರಿಕೆ ವಿರುದ್ಧ ಮಾತ್ರ ನಮ್ಮ ಹೋರಾಟ’ ಎಂದು ಕಾರ್ಯಕರ್ತರು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.