ADVERTISEMENT

ಹಿಂದೂ–ಮುಸ್ಲಿಂ ಸಾಮರಸ್ಯ ಉಳಿಯಲಿ: ಮುಸ್ಲಿಂ ಸಂಘಟನೆಗಳ ಮುಖ್ಯಸ್ಥರು ಮನವಿ

ಮುಸ್ಲಿಂ ಸಂಘಟನೆಗಳ ಮನವಿ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2022, 20:20 IST
Last Updated 1 ಏಪ್ರಿಲ್ 2022, 20:20 IST

ಬೆಂಗಳೂರು: ‘ಹಿಂದೂ–ಮುಸ್ಲಿಂ ಸಾಮರಸ್ಯ ಕದಡಲು ಕೆಲವರು ಉದ್ದೇಶಪೂರ್ವಕವಾಗಿ

ದ್ವೇಷದ ವಾತಾವರಣ ಸೃಷ್ಟಿಸುತ್ತಿದ್ದಾರೆ. ಯಾರು ಎಷ್ಟೇ ದ್ವೇಷ ಹರಡುವ ಪ್ರಯತ್ನ ಮಾಡಿದರೂ ಎಲ್ಲ ಧರ್ಮದವರು ಶಾಂತಿ, ಸಾಮರಸ್ಯದಿಂದಲೇ ಇರಬೇಕು’ ಎಂದು ಮುಸ್ಲಿಂ ಸಂಘಟನೆಗಳ ಮುಖ್ಯಸ್ಥರು ಮನವಿ ಮಾಡಿದ್ದಾರೆ.

ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಾಸಿಹ್‌ ಫೌಂಡೇಷನ್ ಅಧ್ಯಕ್ಷ ಮೌಲಾನಾ ಸಯ್ಯದ್ ಶಬ್ಬೀರ್ ಅಹ್ಮದ್‌ ನದ್ವಿ, ‘ಜನರು ಸಾಕಷ್ಟು ಸಮಸ್ಯೆಗಳಿಂದ ಪರದಾಡುತ್ತಿದ್ದಾರೆ. ಅವುಗಳನ್ನು ಪರಿಹರಿಸುವುದನ್ನು ಬಿಟ್ಟು ಕೆಲವರು ಉತ್ಸವಗಳಲ್ಲಿ ಮುಸ್ಲಿಂ ವ್ಯಾಪಾರಿಗಳ ಬಹಿಷ್ಕಾರ, ಹಲಾಲ್‌ ವಿಷಯಗಳ ಮೂಲಕ ಸಾಮರಸ್ಯ ಹಾಳು ಮಾಡಲು ಯತ್ನಿಸಿದ್ದಾರೆ’ ಎಂದು ದೂರಿದರು.

ADVERTISEMENT

ಜಮೀಯತ್ ಉಲಮಾ ಕರ್ನಾಟಕದ ಅಧ್ಯಕ್ಷ ಮುಫ್ತಿ ಇಫ್ತೆಯಾರ್ ಅಹ್ಮದ್ ಖಾಸ್ಮಿ,‘ಮಸೀದಿಗಳ ಬಳಿ ಎಲ್ಲ ಧರ್ಮದವರು ಹಣ್ಣು ಹಾಗೂ ಇತರ ಅಂಗಡಿಗಳನ್ನು ಇಡುತ್ತಾರೆ. ಧರ್ಮಗಳ ನಡುವೆ ತಾರತಮ್ಯ ಒಳ್ಳೆಯದಲ್ಲ. ದ್ವೇಷ ಮತ್ತು ದ್ವೇಷದ ಸಂದೇಶಗಳನ್ನು ಯಾರೂ ಕೊಡಬಾರದು. ಎಲ್ಲ ಧರ್ಮದವರ ಅಂಗಡಿಗಳಲ್ಲೂ ಎಂದಿನಂತೆಯೇ ಖರೀದಿ ಮುಂದುವರಿಸಬೇಕು’ ಎಂದರು.

ಬೆಂಗಳೂರು ಜಾಮಿಯಾ ಮಸ್ಜಿದ್‌ನ ಇಮಾಮ ಮೌಲಾನಾ ಮಕ್ಸೂದ್ ಇಮ್ರಾನ್‌ ರಷಾದಿ, ‘ತಮ್ಮ ಧರ್ಮಗಳನ್ನು ಪಾಲಿಸುತ್ತಾ ಇತರ ಧರ್ಮಗಳನ್ನೂ ಗೌರವದಿಂದ ಕಂಡಾಗ ಮಾತ್ರ ಪ್ರಜಾಪ್ರಭುತ್ವ ಹಾಗೂ ಸಾಮರಸ್ಯ ಉಳಿಯಲು ಸಾಧ್ಯ. ದ್ವೇಷ ಹರಡುವವರ ಮಾತುಗಳಿಗೆ ಯಾರು ಮರುಳಾಗಬೇಡಿ’ ಎಂದು ಮನವಿ ಮಾಡಿದರು.

ಜುಮ್ಮಾ ಮಸ್ಜಿದ್‌ ಟ್ರಸ್ಟ್‌, ಜಾಮಿಯಾ ತಲ್ಹಾ, ಜಮಾತ್‌ ಎ ಇಸ್ಲಾಮಿ ಹಿಂದ್‌ ಸೇರಿದಂತೆ ವಿವಿಧ ಮುಸ್ಲಿಂ ಸಂಘಟನೆಗಳ ಮುಖ್ಯಸ್ಥರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.