ADVERTISEMENT

‘ಹಿಂದೂಗಳ ತಟಸ್ಥತೆಯಿಂದ ಸಂಸ್ಕೃತಿ ನಾಶ’

ದೇವಸ್ಥಾನ ಸಂಪ್ರದಾಯ ಉಳಿಸಿ ಸಂವಾದದಲ್ಲಿ ಹೊಮ್ಮಿದ ಮಾತು

​ಪ್ರಜಾವಾಣಿ ವಾರ್ತೆ
Published 5 ಜನವರಿ 2019, 20:28 IST
Last Updated 5 ಜನವರಿ 2019, 20:28 IST

ಬೆಂಗಳೂರು: ಇಂದು ದೇವಾಲಯಗಳ ಸಂಸ್ಕೃತಿಯ ಮೇಲೆ ದಾಳಿಗಳು ನಡೆಯುತ್ತಿವೆ. ಪಾಶ್ಚಾತ್ಯ ಚಿಂತನೆಯ ಪ್ರಗತಿಪರರಿಂದ ಹಾಗೂ ಸರ್ಕಾರದಿಂದ ನಡೆಯುತ್ತಿರುವ ಈ ದಾಳಿಗಳನ್ನು ಹಿಂದೂಗಳು ಒಗ್ಗಟ್ಟಾಗಿ ತಡೆಯಬೇಕು ಎಂಬ ಸರ್ವಾನುಮತದ ಅಭಿಮತ ‘ದೇವಸ್ಥಾನ ಸಂಪ್ರದಾಯ ಉಳಿಸಿ’ ಸಂವಾದದಲ್ಲಿ ವ್ಯಕ್ತವಾಯಿತು.

‘ದೇವಾಲಯಗಳಲ್ಲಿ ಸೇವೆ ಮಾಡುವವರು, ಮುಂಭಾಗದಲ್ಲಿ ಅಂಗಡಿ–ಮುಂಗಟ್ಟುಗಳನ್ನು ನಡೆಸುವವರು, ಜಾತ್ರೆಗಳಲ್ಲಿ ಭಾಗವಹಿಸುವ ಭಕ್ತಾದಿಗಳೆಲ್ಲರೂ ದೈವದ ಹೆಸರಲ್ಲಿ ಒಂದಾಗಿರುತ್ತಾರೆ. ದೇವರ ಆಲಯಗಳಿಂದಲೇ ಕಲೆ, ಮೌಲ್ಯಾಧಾರಿತ ಶಿಕ್ಷಣ ಬೆಳೆಯುತ್ತದೆ. ಇದನ್ನೇ ದೇವಸ್ಥಾನದ ಸಂಸ್ಕೃತಿ ಎನ್ನಲಾಗುತ್ತದೆ. ಧರ್ಮಸೂಕ್ಷ್ಮತೆಗಳ ಬಗ್ಗೆ ತಿಳುವಳಿಕೆ ಇಲ್ಲದವರು ಸಂಸ್ಕೃತಿಯ ನಿಯಮ, ಸಂಪ್ರದಾಯವನ್ನು ಹಾಳು ಮಾಡುತ್ತಿದ್ದಾರೆ. ಯಾರ ಪರವಾಗಿ ನಿಲ್ಲಬೇಕೆಂಬ ಗೊಂದಲ ಹಿಂದೂಗಳಲ್ಲೂ ಮೂಡುತ್ತಿದೆ. ಹಾಗಾಗಿ ಅವರು ತಟಸ್ಥರಾಗಿದ್ದಾರೆ. ಆ ತಟಸ್ಥತೆಯಿಂದಲೂ ಸಂಸ್ಕೃತಿ ನಶಿಸುತ್ತದೆ’ ಎಂಬ ಅಭಿಪ್ರಾಯ ಮಾತುಕತೆಯಿಂದ ಹೊಮ್ಮಿತು.

ಆರ್ಗನೈಸರ್ ನಿಯತಕಾಲಿಕೆ ವತಿಯಿಂದ ನಗರದ ಕೆಎಲ್‌ಇ ಶಿಕ್ಷಣ ಸಂಸ್ಥೆಯಲ್ಲಿ ಈ ಸಂವಾದ ಆಯೋಜಿಸಲಾಗಿತ್ತು. ಹೆರಿಟೇಜ್ ಟ್ರಸ್ಟ್ ಸಂಸ್ಥಾಪಕಿ ವಿಜಯಲಕ್ಷ್ಮಿ ವಿಜಯಕುಮಾರ್, ‘ಲಿಂಗ ಸಮಾನತೆ ಎಂಬ ಹೋರಾಟ ದೇಶದ ಹೊರಗಿನಿಂದ ಬಂದವರ ಚಿಂತನ
ಯಾಗಿದೆ. ಹಿಂದೂ ಧರ್ಮದಲ್ಲಿನ ಕೋಟ್ಯಂತರ ದೇವರುಗಳು, ಲಕ್ಷಾಂತರ ದೇವಾಲಯಗಳು, ಹತ್ತಾರು ಪುರಾಣಗಳನ್ನು ಕಂಡು ಬೇರೆ ಧರ್ಮದವರು ಗೊಂದಲ ಮೂಡಿಸುತ್ತಿದ್ದಾರೆ. ಕೆಲವು ಹಿಂದೂಗಳು ಸಹ ಧರ್ಮದ ಮಹತ್ವ ಅರಿಯದೆ ಗೊಂದಲಕ್ಕೆ ಒಳಗಾಗುತ್ತಿದ್ದಾರೆ. ಅವರು ಹಿಂದೂಗಳಲ್ಲಿ ಲಿಂಗ ಅಸಮಾನತೆ ನಿಜಕ್ಕೂ ಇದೆ ಎಂದೇ ನಂಬಿದ್ದಾರೆ. ಶಬರಿಮಲೆ ವಿಚಾರದಲ್ಲಿ ಹೀಗಾಗಿದೆ’ ಎಂದು ಹೇಳಿದರು.

ADVERTISEMENT

ಟೆಂಪಲ್ ವರ್ಶಿಪರ್ಸ್‌ ಸೊಸೈಟಿಯ ಗೌರವ ಅಧ್ಯಕ್ಷ ಟಿ.ಆರ್.ರಮೇಶ್, ‘ಸ್ವಾತಂತ್ರ್ಯ ಪೂರ್ವದಲ್ಲಿ ಮದ್ರಾಸ್ ಪ್ರಾಂತ್ಯದ ಆಡಳಿತ ಕಾಲದಲ್ಲಿ ಸುಮಾರು 45 ಲಕ್ಷ ಎಕರೆ ಜಮೀನನ್ನು ಹಿಂದೂ ಧರ್ಮ ಸಂಸ್ಥೆಗಳಿಗಾಗಿ ತಮಿಳುನಾಡಿನಲ್ಲಿ ಮೀಸಲಿಡಲಾಗಿತ್ತು. ದೇಶಕ್ಕೆ ಸ್ವಾತಂತ್ರ್ಯ ಬಂದ ಮೇಲೆ ಸರ್ಕಾರಗಳು, ಅಧಿಕಾರಿಗಳು ಜಮೀನನ್ನು ಬೇಕಾದಂತೆ ಬಳಸಿದರು. ಈಗ 1,200 ಎಕರೆ ಮಾತ್ರ ದೇವಾಲಯಗಳ ವ್ಯಾಪ್ತಿಯಲ್ಲಿದೆ. ಸರ್ಕಾರವು ದೇವಸ್ಥಾನಗಳನ್ನು ಬಡವಾಗಿಸುವ ಮೂಲಕ ಸಂಸ್ಕೃತಿಯನ್ನು ನಾಶ ಮಾಡುತ್ತಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ದೇವಸ್ಥಾನಗಳನ್ನೇ ಕೇಂದ್ರವಾಗಿಸಿ ಬೆಳೆದ ಹಳ್ಳಿಗಳು, ನಗರಗಳು ಹಾಗೂ ಜನ ಸಮುದಾಯಗಳು ನಮ್ಮ ದೇಶದಲ್ಲಿವೆ. ದೇವರ ಆಲಯಗಳು ನಾಶವಾದರೆ, ಸಮುದಾಯವೂ ನಾಶವಾಗುತ್ತದೆ’ ಎಂದು ಚಿಂತಕಿ ಗಾಯತ್ರಿ ನರೇಂದ್ರನ್‌ ಆತಂಕ ಹೊರಹಾಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.