ADVERTISEMENT

ಕಿದ್ವಾಯಿ ಕ್ಯಾನ್ಸರ್ ಸಂಸ್ಥೆ | ಹಿಸ್ಟೊಪೆಥಾಲಜಿ ಘಟಕ ಸ್ಥಗಿತ: ರೋಗಿಗಳಿಗೆ ಸಂಕಷ್ಟ

ವರುಣ ಹೆಗಡೆ
Published 20 ಮಾರ್ಚ್ 2025, 23:30 IST
Last Updated 20 ಮಾರ್ಚ್ 2025, 23:30 IST
ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ
ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ   

ಬೆಂಗಳೂರು: ಕ್ಯಾನ್ಸರ್ ದೃಢಪಡಿಸಲು ಹಾಗೂ ಯಾವ ಹಂತವೆಂದು ಗುರುತಿಸಿ ಚಿಕಿತ್ಸೆ ಒದಗಿಸಲು ಸಹಕಾರಿಯಾಗಿದ್ದ ಹಿಸ್ಟೊಪೆಥಾಲಜಿ ಘಟಕವು ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯಲ್ಲಿ ತನ್ನ ಕಾರ್ಯ ಸ್ಥಗಿತಗೊಳಿಸಿದೆ. ಇದರಿಂದಾಗಿ ಕ್ಯಾನ್ಸರ್ ಶಂಕಿತರು ಹಾಗೂ ಕ್ಯಾನ್ಸರ್ ಪೀಡಿತರು ಸಂಕಷ್ಟಕ್ಕೆ ಸಿಲುಕಿದ್ದಾರೆ. 

ಕಿದ್ವಾಯಿ ಸಂಸ್ಥೆಯು ಕ್ಯಾನ್ಸರ್ ಚಿಕಿತ್ಸೆಯ ಜತೆಗೆ ಶಿಕ್ಷಣ, ಸಂಶೋಧನೆ ಹಾಗೂ ರೋಗದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯದಲ್ಲಿಯೂ ತೊಡಗಿಕೊಂಡಿದೆ. ಕ್ಯಾನ್ಸರ್ ಚಿಕಿತ್ಸೆಗೆ ರಾಜ್ಯದ ವಿವಿಧ ಭಾಗಗಳ ಜತೆಗೆ ಹೊರ ರಾಜ್ಯಗಳಿಂದಲೂ ಇಲ್ಲಿನ ಹೊಂಬೇಗೌಡ ನಗರದಲ್ಲಿರುವ ಸಂಸ್ಥೆಗೆ ಪ್ರತಿನಿತ್ಯ ಸಾವಿರಾರು ರೋಗಿಗಳು ಬರುತ್ತಾರೆ. ಈ ಸಂಸ್ಥೆಯ ಘಟಕದಲ್ಲಿನ ಹಿಸ್ಟೊಪೆಥಾಲಜಿ ಯಂತ್ರವು ತಿಂಗಳಿಂದ ಕೆಟ್ಟಿದೆ. ಪರಿಣಾಮ, ಮೂರು ಸಾವಿರಕ್ಕೂ ಅಧಿಕ ಅಂಗಾಂಶ ಮಾದರಿಗಳು ಪ್ರಯೋಗಾಲಯದಲ್ಲಿಯೇ ಪರೀಕ್ಷೆಗೆ ಬಾಕಿ ಉಳಿದಿರುವುದು ಕಿದ್ವಾಯಿ ಮೂಲಗಳಿಂದ ತಿಳಿದು ಬಂದಿದೆ.

ಹಿಸ್ಟೊಪೆಥಾಲಜಿ ಯಂತ್ರ ಕಾರ್ಯನಿರ್ವಹಿಸದಿದ್ದರಿಂದ ರೋಗ ನಿರ್ಣಯ ಹಾಗೂ ಚಿಕಿತ್ಸೆಗೆ ತೊಡಕಾಗಿದೆ. ಕ್ಯಾನ್ಸರ್ ಪೀಡಿತರು ಹಾಗೂ ರೋಗ ಶಂಕಿತರು ಈ ಪರೀಕ್ಷೆಗೆ ಪರದಾಡುತ್ತಿದ್ದಾರೆ. ವಿವಿಧ ಪ್ರಕಾರದ ಕ್ಯಾನ್ಸರ್ ಪೀಡಿತರು ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು, ಚಿಕಿತ್ಸೆ ನಂತರದಲ್ಲಿ ಕಿಮೊಥೆರಪಿ ಅಥವಾ ರೇಡಿಯೊಥೆರಪಿ ಚಿಕಿತ್ಸೆ ಪಡೆಯಲು ಸಾಧ್ಯವಾಗದೆ ಸಮಸ್ಯೆ ಎದುರಿಸುತ್ತಿದ್ದಾರೆ. 

ADVERTISEMENT

ಟೆಂಡರ್ ಪ್ರಕ್ರಿಯೆ ವಿಳಂಬ:

ಹಿಸ್ಟೊಪೆಥಾಲಜಿ ಯಂತ್ರವನ್ನು ಅಂದಾಜು ₹ 20 ಲಕ್ಷದಲ್ಲಿ ಖರೀದಿಸಿ, 2011ರಲ್ಲಿ ಸಂಸ್ಥೆಯ ಘಟಕದಲ್ಲಿ ಅಳವಡಿಸಲಾಗಿದೆ. ಯಂತ್ರದ ಕಾರ್ಯನಿರ್ವಹಣಾ ಅವಧಿ 10 ವರ್ಷಗಳಾಗಿದ್ದು, 2023ರಲ್ಲಿಯೇ ಹೊಸ ಯಂತ್ರ ಖರೀದಿಗೆ ಆಡಳಿತ ಮಂಡಳಿಗೆ ಪ್ರಸ್ತಾವ ಸಲ್ಲಿಕೆಯಾಗಿತ್ತು. ಆದರೆ, ಟೆಂಡರ್ ಪ್ರಕ್ರಿಯೆ ನಡೆಯದಿದ್ದರಿಂದ ಹೊಸ ಯಂತ್ರ ಅಳವಡಿಕೆ ಸಾಧ್ಯವಾಗಲಿಲ್ಲ ಎಂದು ಸಂಸ್ಥೆಯ ಮೂಲಗಳು ತಿಳಿಸಿವೆ.

‘ಸ್ತನ ಕ್ಯಾನ್ಸರ್ ಸಂಬಂಧ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು, ಕ್ಯಾನ್ಸರ್ ಕೋಶಗಳ ಗಡ್ಡೆಯ ಅಂಗಾಂಶ ಮಾದರಿಯನ್ನು ಪರೀಕ್ಷೆಗೆ ಹಿಸ್ಟೊಪೆಥಾಲಜಿ ಘಟಕಕ್ಕೆ ಕಳುಹಿಸಲಾಗಿತ್ತು. ಆರು ವಾರಗಳು ಕಳೆದರೂ ವರದಿ ಬಂದಿಲ್ಲ. ಈ ವರದಿ ಆಧರಿಸಿ ಕಿಮೊಥೆರಪಿ ಅಥವಾ ರೇಡಿಯೊಥೆರಪಿ ನಿರ್ಧರಿಸುವುದಾಗಿ ವೈದ್ಯರು ತಿಳಿಸಿದ್ದಾರೆ’ ಎಂದು ತುಮಕೂರು ಜಿಲ್ಲೆಯ ತಿಪಟೂರಿನ 45 ವರ್ಷದ ಮಹಿಳೆಯೊಬ್ಬರು ತಿಳಿಸಿದರು. 

ಹಿಸ್ಟೊಪೆಥಾಲಜಿ ಯಂತ್ರವನ್ನು ರಿಪೇರಿ ಮಾಡಲಾಗಿದ್ದು ಪರೀಕ್ಷೆ ನಡೆಸಲಾಗುತ್ತಿದೆ. ಹೊಸ ಯಂತ್ರವನ್ನು ಶೀಘ್ರದಲ್ಲಿಯೇ ಖರೀದಿಸಲಾಗುವುದು
ಡಾ.ಟಿ.ನವೀನ್ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ ನಿರ್ದೇಶಕ
ವರದಿ ವಿಳಂಬದಿಂದ ಸಮಸ್ಯೆ
ಬಯಾಪ್ಸಿ ಪರೀಕ್ಷೆಯಿಂದ ಕ್ಯಾನ್ಸರ್ ಪತ್ತೆ ಮಾಡಲಾಗುತ್ತದೆ. ಇದನ್ನು ಹಿಸ್ಟೊಪೆಥಾಲಜಿ ಘಟಕದ ನೆರವಿನಿಂದ ನಡೆಸಲಾಗುತ್ತದೆ. ಅಂಗಾಂಶದ ಸ್ವಲ್ಪ ಭಾಗವನ್ನು ತೆಗೆದು, ಪರೀಕ್ಷೆ ಮಾಡುವುದೇ ಬಯಾಪ್ಸಿ. ಮೊದಲ ಹಂತದಲ್ಲೇ ಕ್ಯಾನ್ಸರ್ ಪತ್ತೆಯಾದಲ್ಲಿ ಪರಿಣಾಮಕಾರಿ ಚಿಕಿತ್ಸೆ ಸಾಧ್ಯ. ಶಸ್ತ್ರಚಿಕಿತ್ಸೆ ಮಾಡಿಸಿಕೊಂಡವರಿಗೂ ಕ್ಯಾನ್ಸರ್ ಯಾವ ಹಂತದಲ್ಲಿದೆ, ಮುಂದಿನ ಚಿಕಿತ್ಸೆ ಏನು ಎಂದು ನಿರ್ಧರಿಸಲು ಈ ಘಟಕದಲ್ಲಿ ನಡೆಸುವ ಪರೀಕ್ಷೆ ಸಹಕಾರಿ. ವರದಿ ವಿಳಂಬದಿಂದ ಚಿಕಿತ್ಸೆಗೆ ಸಮಸ್ಯೆಯಾಗುತ್ತಿದೆ ಎಂದು ಸಂಸ್ಥೆಯ ವೈದ್ಯರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.