ಬೆಂಗಳೂರು: ಹೃದಯಾಘಾತಕ್ಕೆ ಒಳಗಾಗಿದ್ದ ತಮಿಳುನಾಡಿನ 45 ವರ್ಷದ ಎಚ್ಐವಿ ಸೋಂಕಿತ ಲಿಂಗತ್ವ ಅಲ್ಪಸಂಖ್ಯಾತೆಗೆ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ವೈದ್ಯರು ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಿ, ಮೂರು ಸ್ಟೆಂಟ್‌ಗಳನ್ನು ಅಳವಡಿಸಿದ್ದಾರೆ.
ಶಸ್ತ್ರಚಿಕಿತ್ಸೆಗೆ ಒಳಗಾದ ಲಿಂಗತ್ವ ಅಲ್ಪಸಂಖ್ಯಾತೆ ಮಧುರೈನವರಾಗಿದ್ದು, ಆರು ವರ್ಷಗಳಿಂದ ಬೆಂಗಳೂರಿನಲ್ಲಿ ನೆಲಸಿದ್ದಾರೆ. ಹೃದಯಾಘಾತಕ್ಕೆ ಒಳಗಾದ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ಸಹಾಯಕರು ಕರೆದೊಯ್ದಿದ್ದರು. ಎಚ್‌ಐವಿ ಸೋಂಕಿತರೂ ಆಗಿದ್ದ ಕಾರಣ ಅವರನ್ನು ದಾಖಲಿಸಿಕೊಳ್ಳಲು ಆಸ್ಪತ್ರೆಯವರು ನಿರಾಕರಿಸಿದ್ದರಿಂದ, ಜಯದೇವ ಆಸ್ಪತ್ರೆಗೆ ಭೇಟಿ ನೀಡಿದ್ದರು. ಡಾ.ಎಚ್.ಎಸ್. ನಟರಾಜ್ ಶೆಟ್ಟಿ ನೇತೃತ್ವದಲ್ಲಿ ವೈದ್ಯರ ತಂಡ ಲಿಂಗತ್ವ ಅಲ್ಪಸಂಖ್ಯಾತೆಗೆ ಶಸ್ತ್ರಚಿಕಿತ್ಸೆ ನಡೆಸಿದ್ದು, ಅವರು ಐದು ದಿನಗಳ ಅವಧಿಯಲ್ಲಿ ಚೇತರಿಸಿಕೊಂಡಿದ್ದಾರೆ. ಸೋಮವಾರ ಆಸ್ಪತ್ರೆಯಿಂದ ತೆರಳಿದರು.
‘ಸಂಸ್ಥೆಯ ನಿರ್ದೇಶಕ ಡಾ.ಬಿ. ದಿನೇಶ್ ಅವರ ಮಾರ್ಗದರ್ಶನದಲ್ಲಿ ಈ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಮೂರು ಸ್ಟೆಂಟ್‌ಗಳನ್ನು ಅಳವಡಿಸಿದ ಪರಿಣಾಮ ಅವರು ಬದುಕುಳಿದಿದ್ದು, ಪುನರ್ಜನ್ಮ ದೊರೆತಂತಾಗಿದೆ. ಆಸ್ಪತ್ರೆಯ ಚಿಕಿತ್ಸಾ ವೆಚ್ಚ ₹ 2.5 ಲಕ್ಷವಾಗಿದ್ದು, ಬಡವರೆಂಬ ಕಾರಣಕ್ಕೆ ಸಂಪೂರ್ಣ ಉಚಿತವಾಗಿ ಚಿಕಿತ್ಸೆ ಒದಗಿಸಲಾಗಿದೆ. ಅವರ ಬಳಿ ಹಣ ಹಾಗೂ ಯಾವುದೇ ವೈಯಕ್ತಿಕ ದಾಖಲಾತಿ ಇರಲಿಲ್ಲ’ ಎಂದು ಡಾ.ಎಚ್.ಎಸ್. ನಟರಾಜ್ ಶೆಟ್ಟಿ ತಿಳಿಸಿದರು.
‘ಅವರಿಗೆ ಎದೆನೋವು ಇದ್ದಿದ್ದರಿಂದ ಆಸ್ಪತ್ರೆಗೆ ಭೇಟಿ ನೀಡಿದ ಕೂಡಲೇ ಇಸಿಜಿ, ರಕ್ತ ಪರೀಕ್ಷೆ ಮಾಡಲಾಯಿತು. ಆಂಜಿಯೋಗ್ರಾಮ್ ಮಾಡಿದಾಗ, ಹೃದಯದ ನಾಳಗಳಲ್ಲಿ ಸಂಕೀರ್ಣ ಬ್ಲಾಕೇಜ್ ಇರುವುದು ದೃಢಪಟ್ಟಿತು. ಬ್ಲಾಕೇಜ್ ತೆರೆಯುವ ವೇಳೆ ಹೃದಯ ಸ್ತಂಭನಕ್ಕೆ ಒಳಗಾಗಿದ್ದರು. ಸಿಪಿಆರ್ ನಡೆಸಿ, ಅವರು ಚೇತರಿಸಿಕೊಳ್ಳಲು ಮೂರು ಸ್ಟೆಂಟ್ ಅಳವಡಿಸಲಾಯಿತು. ಈಗ ಸಂಪೂರ್ಣ ಚೇತರಿಸಿಕೊಂಡಿದ್ದಾರೆ’ ಎಂದರು.
‘ಲಿಂಗತ್ವ ಅಲ್ಪಸಂಖ್ಯಾತರಾಗುವ ಜತೆಗೆ ಎಚ್‌ಐವಿ ಸೋಂಕಿತರೂ ಆಗಿದ್ದರಿಂದ ಈ ಪ್ರಕರಣದಲ್ಲಿ ಶಸ್ತ್ರಚಿಕಿತ್ಸೆ ಸವಾಲಾಗಿತ್ತು. 15 ವರ್ಷಗಳ ಅನುಭವದಲ್ಲಿ ಸಾವಿರಾರು ಶಸ್ತ್ರಚಿಕಿತ್ಸೆ ನಡೆಸಿದ್ದು, ಈ ಪ್ರಕರಣದ ನಿರ್ವಹಣೆ ಸುಲಭವಾಗಿರಲಿಲ್ಲ’ ಎಂದು ಹೇಳಿದರು.
ಇದೇ ವೇಳೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಲಿಂಗತ್ವ ಅಲ್ಪಸಂಖ್ಯಾತೆ ಹಾಗೂ ಅವರ ಸಹಾಯಕರು ವೈದ್ಯರ ಸೇವೆ ಬಗ್ಗೆ ಸಂತಸ ವ್ಯಕ್ತಪಡಿಸಿ, ನಿರ್ದೇಶಕ ಡಾ.ಬಿ. ದಿನೇಶ್ ಹಾಗೂ ಡಾ.ಎಚ್.ಎಸ್. ನಟರಾಜ್ ಶೆಟ್ಟಿ ಅವರನ್ನು ಗೌರವಿಸಿದರು.
ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರ ತಂಡವು ಡಾ.ಶ್ರೀಧರ್, ಡಾ.ರಾಹುಲ್ ಪಾಟೀಲ, ಡಾ.ಚೇತನ್ ಕುಮಾರ್, ಡಾ.ನಟೇಶ್, ಡಾ.ರಾಜೇಂದ್ರನ್ ಹಾಗೂ ಡಾ.ಸಂತೋಷ್ ಜಾಧವ್ ಅವರನ್ನು ಒಳಗೊಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.