ADVERTISEMENT

ಮನೆ ಆರೈಕೆ: ನಿತ್ಯ ಸೋಂಕಿತರ ಮೌಲ್ಯಮಾಪನ

ಕೋವಿಡ್‌ ಸಾವು ಸಂಭವಿಸದಂತೆ ಎಚ್ಚರ ವಹಿಸಲು ಆರೋಗ್ಯ ಇಲಾಖೆ ಸೂಚನೆ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2020, 18:49 IST
Last Updated 2 ಅಕ್ಟೋಬರ್ 2020, 18:49 IST
   

ಬೆಂಗಳೂರು: ಮನೆ ಆರೈಕೆಗೆ ಒಳಪಟ್ಟಿರುವ ಕೊರೊನಾ ಸೋಂಕಿತರ ಆರೋಗ್ಯದ ಸ್ಥಿತಿಗತಿಯ ಬಗ್ಗೆ 18 ದಿನಗಳವರೆಗೂ ನಿರಂತರ ಮೌಲ್ಯಮಾಪನ ಮಾಡುವ ಮೂಲಕ ಕೋವಿಡ್‌ ಮರಣವನ್ನು ತಡೆಯಬೇಕು ಎಂದು ಆರೋಗ್ಯ ಇಲಾಖೆಯು ಅಧಿಕಾರಿಗಳಿಗೆ ಸೂಚಿಸಿದೆ.

ಮನೆ ಆರೈಕೆಗೆ ಸಂಬಂಧಿಸಿದಂತೆ ಇಲಾಖೆಯ ಆಯುಕ್ತರು ಸುತ್ತೋಲೆ ಹೊರಡಿಸಿದ್ದಾರೆ. ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಏರಿಕೆ ಕಂಡ ಕಾರಣ ಜುಲೈ ತಿಂಗಳಲ್ಲಿ 50 ವರ್ಷದೊಳಗಿನ ಲಕ್ಷಣ ರಹಿತರಿಗೆ ಮನೆ ಆರೈಕೆಗೆ ಅವಕಾಶ ನೀಡಲಾಗಿತ್ತು. ಆಗಸ್ಟ್‌ ತಿಂಗಳಲ್ಲಿ ಪರಿಷ್ಕೃತ ಮಾರ್ಗಸೂಚಿ ಹೊರಡಿಸಿದ ಇಲಾಖೆ,ವೈದ್ಯಕೀಯ ವಿಶ್ಲೇಷಣೆಯಿಂದಜೀವಕ್ಕೆ ಅಪಾಯವಿಲ್ಲ ಎನ್ನುವುದು ದೃಢಪಟ್ಟಲ್ಲಿ ಮಧುಮೇಹ, ಅಧಿಕ ರಕ್ತದೊತ್ತಡ ಸೇರಿದಂತೆ ವಿವಿಧ ಕಾಯಿಲೆಗಳನ್ನು ಎದುರಿಸುತ್ತಿರುವವರು ಹಾಗೂ 60 ವರ್ಷದವರೆಗಿನ ಕೋವಿಡ್‌ ಪೀಡಿತರು ಕೂಡ ಮನೆ ಆರೈಕೆಗೆ ಒಳಪಡಬಹುದು ಎಂದು ತಿಳಿಸಿತ್ತು.

ಮನೆ ಆರೈಕೆಗೆ ಒಳಗಾದ ವ್ಯಕ್ತಿ ಹೆಚ್ಚು ಅಸ್ವಸ್ಥನಾಗಿದ್ದಲ್ಲಿ ಅಥವಾ ಜೀವಕ್ಕೆ ಅಪಾಯ ಇರುವ ಸೂಚನೆಗಳು ಗಮನಕ್ಕೆ ಬಂದಲ್ಲಿ ತ್ವರಿತವಾಗಿ ಹತ್ತಿರದ ಆಸ್ಪತ್ರೆಗೆ ತೆರಳಲು ಸೂಚಿಸಬೇಕು. ಆಗ ಕೋವಿಡ್‌ನಿಂದ ಸಂಭವಿಸುವ ಸಾವುಗಳನ್ನು ತಡೆಯಲು ಸಾಧ್ಯ. ಕೊರೊನಾ ಸೋಂಕು ದೃಢಪಟ್ಟ ಮೊದಲ ದಿನ ದೂರವಾಣಿ ಚಿಕಿತ್ಸೆಯ ಸರದಿಯನ್ನು ನಿಗದಿಪಡಿಸಬೇಕು. ವ್ಯಕ್ತಿಯ ನಾಡಿಮಿಡಿತ, ರಕ್ತದಲ್ಲಿನ ಆಮ್ಲಜನಕ ಪ್ರಮಾಣ ಸೇರಿದಂತೆ ಆರೋಗ್ಯಕ್ಕೆ ಸಂಬಂಧಿಸಿದ ವಿವಿಧ ಮಾಹಿತಿ ಪಡೆದು, ಮೌಲ್ಯಮಾಪನ ಮಾಡಬೇಕು. ಪಲ್ಸ್ ಆಕ್ಸಿಮೀಟರ್, ಥರ್ಮಾಮೀಟರ್,ಮಾತ್ರೆಗಳನ್ನು ಒಳಗೊಂಡ ಮನೆ ಆರೈಕೆ ಕಿಟ್‌ ನೀಡಬೇಕು. ಎಲ್ಲ ರೀತಿಯ ಸೌಲಭ್ಯವಿದ್ದರೆ ಮಾತ್ರ ಅವಕಾಶ ನೀಡಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ADVERTISEMENT

ಮನೆಗಳಿಗೆ ಭೇಟಿ:ಓರ್ವ ವೈದ್ಯರು ಸೇರಿದಂತೆ 10ರಿಂದ 20 ಮಂದಿಯನ್ನು ಒಳಗೊಂಡಿರುವ ಆರೊಗ್ಯ ಸಿಬ್ಬಂದಿಯ ತಂಡವು ಭೌಗೋಳಿಕ ಪ್ರದೇಶವನ್ನು ಅವಲಂಬಿಸಿ ಆರಂಭಿಕ ಚಿಕಿತ್ಸೆಯ ಸರದಿ ನಿರ್ಧರಿಸಬೇಕು. ಮೂರು ದಿನಗಳಿಗೆ ಒಮ್ಮೆ ಸೋಂಕಿತ ವ್ಯಕ್ತಿಯ ಮನೆಗೆ ಭೇಟಿ ನೀಡಿ, ಆರೋಗ್ಯ ತಪಾಸಣೆ ನಡೆಸಬೇಕು. ವ್ಯಕ್ತಿ ಬೇರೆ ಕಾಯಿಲೆಯಿಂದ ಸಮಸ್ಯೆಗೆ ಒಳಗಾದಲ್ಲಿ ಅಥವಾ ಸೋಂಕಿಗೆ ಅಸ್ವಸ್ಥನಾದಲ್ಲಿ ಆಸ್ಪತ್ರೆಗೆ ಕರೆದೊಯ್ಯಲಾಗುತ್ತದೆ. ಡಿಜಿಟಲ್ ಮೊಬೈಲ್ ತಂಡವು ಥರ್ಮಾಮೀಟರ್, ಪಲ್ಸ್‌ ಆಕ್ಸಿಮೀಟರ್, ಔಷಧಗಳು ಹಾಗೂ ವೈದ್ಯಕೀಯ ಉಪಕರಣಗಳನ್ನು ಹೊಂದಿರಬೇಕು ಎಂದು ಸೂಚಿಸಲಾಗಿದೆ.

18ನೇ ದಿನಕ್ಕೆ ಅಂತಿಮ ಪರೀಕ್ಷೆ

2ರಿಂದ 10ನೇ ದಿನಗಳ ಅವಧಿಯಲ್ಲಿ ಪ್ರತಿನಿತ್ಯ ದೂರವಾಣಿ ಮೂಲಕ ಮನೆ ಆರೈಕೆಗೆ ಒಳಗಾದವರ ಆರೋಗ್ಯವನ್ನು ವಿಚಾರಿಸುತ್ತಿರಬೇಕು. ಕಾಯಿಲೆಗಳಿಂದ ಅಸ್ವಸ್ಥರಾದವರ ಮನೆಗೆ ಪ್ರತಿನಿತ್ಯ ಭೇಟಿ ನೀಡಬೇಕು. 11ನೇ ದಿನದ ಬಳಿಕ ವ್ಯಕ್ತಿಯ ದೇಹದ ತಾಪಮಾನ, ನಾಡಿ ಮಿಡಿತ ಹಾಗೂ ರಕ್ತದಲ್ಲಿನ ಆಮ್ಲಜನಕದ ಪ್ರಮಾಣವನ್ನು ತಪಾಸಣೆ ಮಾಡಬೇಕು. ಆರೋಗ್ಯ ಸಹಜ ಸ್ಥಿತಿಗೆ ಬಂದಿದ್ದಲ್ಲಿ ಹಾಗೂ ಮೂರು ದಿನಗಳಿಂದ ಸೋಂಕಿನ ಯಾವುದೇ ಲಕ್ಷಣ ಇಲ್ಲದಿದ್ದಲ್ಲಿ ಒಂದು ವಾರ ಮನೆಯಲ್ಲಿಯೇ ಪ್ರತ್ಯೇಕವಾಗಿರಲು ಸೂಚಿಸಬೇಕು ಎಂದು ಇಲಾಖೆ ತಿಳಿಸಿದೆ.

18 ದಿನಕ್ಕೆ ವೈದ್ಯಕೀಯ ಅಧಿಕಾರಿಗಳುವ್ಯಕ್ತಿಯನ್ನು ಪರೀಕ್ಷಿಸಿ, ವರದಿ ನೀಡುತ್ತಾರೆ. ಸಂಪೂರ್ಣವಾಗಿ ಗುಣಮುಖರಾಗಿರುವುದು ದೃಢಪಟ್ಟಲ್ಲಿ ಮೊದಲಿನಂತೆ ದೈನಂದಿನ ಕಾರ್ಯಚಟುವಟಿಕೆಯಲ್ಲಿ ತೊಡಗಿಕೊಳ್ಳಬಹುದು ಎಂದು ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.