ADVERTISEMENT

ಪೊಲೀಸ್ ಕಮಿಷನರ್‌ ಹೇಳಿಕೆಗೆ ಸಚಿವರ ತರಾಟೆ

ಜನತಾ ಕರ್ಫ್ಯೂ: ಬಲವಂತ ಇಲ್ಲ– ಗೃಹ ಸಚಿವ ಬಸವರಾಜ ಬೊಮ್ಮಾಯಿ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2020, 4:22 IST
Last Updated 22 ಮಾರ್ಚ್ 2020, 4:22 IST
ಭಾಸ್ಕರ್ ರಾವ್
ಭಾಸ್ಕರ್ ರಾವ್   

ಬೆಂಗಳೂರು:‘ಕೊರೊನಾ ವೈರಸ್‌ ಹರಡದಂತೆ ತಡೆಯಲುನಗರದಲ್ಲಿ ಭಾನುವಾರ ಜನತಾ ಕರ್ಫ್ಯೂ ನಡೆಯಲಿದ್ದು, ಪ್ರತಿಯೊಬ್ಬರು ಮನೆಯಲ್ಲೇ ಇರಬೇಕು. ಉದ್ದೇಶವಿಲ್ಲದೆ ಅನಗತ್ಯವಾಗಿ ಯಾರಾದರೂ ಹೊರಗೆ ಬಂದು ರಸ್ತೆಯಲ್ಲಿ ತಿರುಗಾಡಿದರೆ ಶಿಸ್ತುಕ್ರಮ ಜರುಗಿಸಲಾಗುವುದು’ ಎಂದು ನಗರ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಎಚ್ಚರಿಕೆ ನೀಡಿದ್ದನ್ನು ಗೃಹ ಸಚಿವರು ತರಾಟೆಗೆ ತೆಗೆದುಕೊಂಡಿದ್ದಾರೆ.

ಶನಿವಾರ ಇಲ್ಲಿ ನಡೆದ ಪೊಲೀಸ್‌ ಅಧಿಕಾರಿಗಳೊಂದಿಗಿನ ಸಭೆಯಲ್ಲಿ ‘ಇಂತಹ ಹೇಳಿಕೆ ನೀಡಿ ಗೊಂದಲ ಸೃಷ್ಟಿಸಬೇಡಿ’ ಎಂದು ಕಿವಿಮಾತು ಹೇಳಿದರು ಎಂದು ಮೂಲಗಳು ತಿಳಿಸಿವೆ.

‘ಜನರು ಸ್ವಯಂಪ್ರೇರಿತವಾಗಿ ಮನೆಯಲ್ಲಿ ಇರುವುದೇ ಜನತಾ ಕರ್ಫ್ಯೂ.ಯಾವುದೇ ಬಲವಂತದಿಂದ ಇದನ್ನು ಮಾಡಲಾಗುತ್ತಿಲ್ಲ. ಯಾವುದೇ ಕೇಸ್ ಹಾಕುವುದಿಲ್ಲ, ಜನರು ಸ್ವಯಂ ಪ್ರೇರಣೆಯಿಂದ ಇದನ್ನು ಮಾಡಬೇಕು’ ಎಂದು ಅವರು ಬಳಿಕ ಮಾಧ್ಯಮದವರಿಗೆ ತಿಳಿಸಿದರು.

ADVERTISEMENT

‘ವಿದೇಶದಿಂದ ಬಂದವರು ಹಾಗೂ ರೋಗ ಲಕ್ಷಣ ಇರುವವರು ಮನೆಯಲ್ಲಿ ಪ್ರತ್ಯೇಕ ವಾಸ ಮಾಡಬೇಕು ಎಂಬ ಸೂಚನೆ ಪಡೆದಿದ್ದರೆ ಅದನ್ನು ಕಟ್ಟುನಿಟ್ಟಾಗಿ ಪಾಲಿಸಲೇಬೇಕು.ಇಲ್ಲವಾದರೆ ಬಲವಂತವಾಗಿ ಆಸ್ಪತ್ರೆಗಳಲ್ಲಿನ ಪ್ರತ್ಯೇಕ ವಾರ್ಡ್‌ಗೆ ಹಾಕಬೇಕಾಗುತ್ತದೆ’ ಎಂದರು.

ಶನಿವಾರಪತ್ರಿಕಾಗೋಷ್ಠಿಯಲ್ಲಿ ನಡೆಸಿದ್ದ ಪೊಲೀಸ್‌ ಕಮಿಷನರ್‌ ಭಾಸ್ಕರ್‌ರಾವ್, ‘ಆರೋಗ್ಯದ ದೃಷ್ಟಿಯಿಂದಾಗಿ ಜನರು ಮುಂಜಾಗ್ರತಾ ಕ್ರಮಗಳನ್ನುಪಾಲಿಸಬೇಕು.ಪ್ರಧಾನಿ‌ಯವರ ಕರೆಯಂತೆ ಜನತಾ ಕರ್ಫ್ಯೂ ನಡೆಯುತ್ತಿದೆ. ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಕುಟುಂಬ ಸದಸ್ಯರ ಜೊತೆ ಎಲ್ಲರೂ ಮನೆಯಲ್ಲಿರಬೇಕು. ಪ್ರವಾಸ, ವಾಯುವಿಹಾರ ಹಾಗೂ ನಾನಾ ಕಾರ್ಯಕ್ರಮ
ಹೆಸರಿನಲ್ಲಿ ಹೊರಗಡೆ ಸುತ್ತಾಡಬಾರದು’ ಎಂದು ಹೇಳಿದ್ದರು.

‘ಜನತಾ ಕರ್ಫ್ಯೂ ದಿನದಂದು ಕೈಗೊಳ್ಳಬೇಕಾದ ಕ್ರಮದ ಬಗ್ಗೆ ಆರೋಗ್ಯ ಅಧಿಕಾರಿಗಳು ಹಾಗೂ ಬಿಬಿಎಂಪಿ ಅಧಿಕಾರಿ ಜೊತೆ ಸಭೆ ನಡೆಸಲಾಗಿದೆ. ಅನಗತ್ಯವಾಗಿ ರಸ್ತೆಯಲ್ಲಿ ಓಡಾಡುವವರ ವಿರುದ್ಧ ಕರ್ನಾಟಕ ಪೊಲೀಸ್ ಕಾಯ್ದೆ 31 (ಎಲ್‌) ಅಡಿ ಶಿಸ್ತುಕ್ರಮ ಜರುಗಿಸಲಾಗುವುದು’ ಎಂದು ಎಚ್ಚರಿಸಿದ್ದರು.

‘ತಮಗೆ ಸೋಂಕು ತಗುಲಿದರೂ ಕೆಲವರು ಅದನ್ನು ಮುಚ್ಚಿಡುತ್ತಿರುವುದು ಗಮನಕ್ಕೆ ಬರುತ್ತಿದೆ.ಅಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ತೀರ್ಮಾನಿಸಲಾಗಿದೆ. ಅದರ ಜೊತೆಗೆ ಹಲವು ರಸ್ತೆಗಳಲ್ಲಿ ಬ್ಯಾರಿಕೇಡ್‌ಗಳನ್ನು ಅಳವಡಿಸಿ ಪೊಲೀಸರೇ ಗಸ್ತು ಕಾಯಲಿದ್ದಾರೆ. ಈ ಸಂಬಂಧ ಡಿಸಿಪಿಗಳಿಗೆ ಈಗಾಗಲೇ ಸೂಚನೆ‌ ನೀಡಲಾಗಿದೆ. ಯಾರ ಮೇಲಾದರೂ ಸಂಶಯ ವ್ಯಕ್ತವಾದರೆ ವಶಕ್ಕೆ ಪಡೆದು ಆಸ್ಪತ್ರೆಗೆ ಕರೆದೊಯ್ಯಲಿದ್ದಾರೆ’ ಎಂದು ಮಾಹಿತಿ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.