ADVERTISEMENT

ಕಳ್ಳತನಕ್ಕೆ ಹೊರಟಿದ್ದಾಗಲೇ ಪೊಲೀಸರ ಕೈಗೆ ಸಿಕ್ಕಿಬಿದ್ದ !

​ಪ್ರಜಾವಾಣಿ ವಾರ್ತೆ
Published 23 ಜನವರಿ 2021, 17:24 IST
Last Updated 23 ಜನವರಿ 2021, 17:24 IST
ಲುರ್ದುನಾನನ್
ಲುರ್ದುನಾನನ್   

ಬೆಂಗಳೂರು: ಬಾಗಲಗುಂಟೆ ಠಾಣೆ ವ್ಯಾಪ್ತಿಯ ಮನೆಯೊಂದರಲ್ಲಿ ಕಳ್ಳತನ ಮಾಡಿ ಪರಾರಿಯಾಗಿದ್ದ ಆರೋಪಿ ಲೂರ್ದುನಾದನ್ (62) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

‘ತಮಿಳುನಾಡಿನ ತಿರುಚನಾಪಳ್ಳಿಯ ಲೂರ್ದುನಾದನ್, ಠಾಣೆ ವ್ಯಾಪ್ತಿಯಲ್ಲಿ ಕಳ್ಳತನ ಎಸಗಲು ಸಂಚು ರೂಪಿಸಿದ್ದ. ಅದಕ್ಕಾಗಿ ಜ. 17ರಂದು ರಾತ್ರಿ ದಾಸರಹಳ್ಳಿ ಮೆಟ್ರೊ ನಿಲ್ದಾಣ ಬಳಿ ಹಾದು ಹೊರಟಿದ್ದ. ಆತನ ವರ್ತನೆಯಿಂದ ಅನುಮಾನಗೊಂಡಿದ್ದ ಗಸ್ತು ಸಿಬ್ಬಂದಿ, ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗಲೇ ಕಳ್ಳತನ ಕೃತ್ಯಗಳು ಬಯಲಾಗಿವೆ’ ಎಂದು ಪೊಲೀಸರು ಹೇಳಿದರು.

‘ಪ್ಲಂಬಿಂಗ್ ಕೆಲಸ ಮಾಡುತ್ತಿದ್ದ ಆರೋಪಿ, ಅಪರಾಧ ಹಿನ್ನೆಲೆಯುಳ್ಳವ. ಆತನ ವಿರುದ್ಧ ಪೀಣ್ಯ ಠಾಣೆಯಲ್ಲೂ ಈ ಹಿಂದೆ ಪ್ರಕರಣ ದಾಖಲಾಗಿತ್ತು. ಸದ್ಯ ಆತನ ಬಂಧನದಿಂದ ನಾಲ್ಕು ಪ್ರಕರಣಗಳು ಪತ್ತೆಯಾಗಿವೆ. ಆತನಿಂದ ₹ 7 ಲಕ್ಷ ಮೌಲ್ಯದ 130 ಗ್ರಾಂ ಚಿನ್ನಾಭರಣ ಹಾಗೂ ಒಂದೂವರೆ ಕೆ.ಜಿ ಬೆಳ್ಳಿ ಸಾಮಾನು ಜಪ್ತಿ ಮಾಡಲಾಗಿದೆ.’

ADVERTISEMENT

‘ಹಗಲಿನಲ್ಲಿ ನಗರದಲ್ಲಿ ಸುತ್ತಾಡುತ್ತಿದ್ದ ಆರೋಪಿ, ಮನೆಗಳನ್ನು ಗುರುತಿಸುತ್ತಿದ್ದ. ನಂತರ, ರಾತ್ರಿ ಮನೆಗಳಿಗೆ ಹೋಗಿ ಕಬ್ಬಿಣದ ರಾಡ್‌ನಿಂದ ಬಾಗಿಲು ಮೀಟಿ ಕೃತ್ಯ ಎಸಗುತ್ತಿದ್ದ’ ಎಂದೂ ತಿಳಿಸಿದರು.

‘ಠಾಣೆ ವ್ಯಾಪ್ತಿಯ ಟಿ. ದಾಸರಹಳ್ಳಿ ಬಳಿಯ ಪ್ರಶಾಂತ್ ನಗರ ನಿವಾಸಿ ರಂಗಸ್ವಾಮಿ ಎಂಬುವರ ಮನೆಯಲ್ಲಿ ಕಳ್ಳತನ ಆಗಿತ್ತು. ಈ ಸಂಬಂಧ ಪ್ರಕರಣವೂ ದಾಖಲಾಗಿತ್ತು. ಆ ಮನೆಯಲ್ಲಿ ಕಳ್ಳತನ ಎಸಗಿದ್ದು ಲೂರ್ದುನಾದನ್ ಎಂಬುದು ತನಿಖೆಯಿಂದ ಗೊತ್ತಾಗಿದೆ’ ಎಂದೂ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.