ADVERTISEMENT

ಜೇನು ಉತ್ಪಾದನೆ ಹೆಚ್ಚಿಸಲು ಸಲಹೆ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2019, 19:19 IST
Last Updated 2 ಫೆಬ್ರುವರಿ 2019, 19:19 IST
ಕಾರ್ಯಕ್ರಮದಲ್ಲಿ ಜೇನುಕೃಷಿ ಕುರಿತ ವಿಶೇಷ ಸಂಚಿಕೆಯನ್ನು ಬಿಡುಗಡೆ ನಡೆಯಿತು
ಕಾರ್ಯಕ್ರಮದಲ್ಲಿ ಜೇನುಕೃಷಿ ಕುರಿತ ವಿಶೇಷ ಸಂಚಿಕೆಯನ್ನು ಬಿಡುಗಡೆ ನಡೆಯಿತು   

ಬೆಂಗಳೂರು: ರೈತರು ನೂತನ ತಾಂತ್ರಿಕತೆಯನ್ನು ಬಳಸಿಕೊಂಡು ಜೇನು ಉತ್ಪಾದನೆಯನ್ನು ಹೆಚ್ಚಿಸಬೇಕು ಎಂದು ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ.ಎಸ್.ರಾಜೇಂದ್ರ ಪ್ರಸಾದ್ ಹೇಳಿದರು.

ಕೃಷಿ ವಿಶ್ವವಿದ್ಯಾಲಯದ ಜಿಕೆವಿಕೆಯಲ್ಲಿ ಅಖಿಲಭಾರತ ಸುಸಂಘಟಿತ ಜೇನುನೊಣ ಮತ್ತು ಪರಾಗ ಸ್ಪರ್ಶ ಸಂಶೋಧನಾ ಪ್ರಾಯೋಜನೆ, ತೋಟಗಾರಿಕಾ ಮಿಷನ್ ಹಾಗೂ ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದ ಆಶ್ರಯದಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ಜೇನುಕೃಷಿ ತಾಂತ್ರಿಕ ವಿಚಾರಸಂಕಿರಣ ಮತ್ತು ಮಧುಮೇಳ ಹಾಗೂ ‘ಅಧಿಕಬೆಳೆ ಇಳುವರಿ ಮತ್ತು ಸುಸ್ಥಿರ ಆದಾಯಕ್ಕಾಗಿ ಜೇನುಕೃಷಿ’ ಕುರಿತ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

‘ನಮ್ಮ ಜೇನುತುಪ್ಪವನ್ನು ರಫ್ತುಮಾಡಲು ಸಾಕಷ್ಟು ಅವಕಾಶಗಳಿವೆ. ಇಡೀ ಭಾರತದಲ್ಲಿ ಪ್ರತ್ಯೇಕ ಜೇನುಕೃಷಿ ವಿಭಾಗವಿರುವುದು ನಮ್ಮ ವಿಶ್ವವಿದ್ಯಾಲಯದಲ್ಲಿ ಮಾತ್ರ. ಇಲಾಖೆಯ ಯೋಜನೆಗಳ ಮೂಲಕ ನಮ್ಮಲ್ಲಿರುವ ತಂತ್ರಜ್ಞಾನ ಮತ್ತು ತರಬೇತಿ ಕಾರ್ಯಕ್ರಮಗಳ ಸದುಪಯೋಗ ಪಡೆದುಕೊಂಡು ಜೇನುಕೃಷಿಯಲ್ಲಿ ತೊಡಗಿಸಿಕೊಳ್ಳಬೇಕು’ ಎಂದರು.

ADVERTISEMENT

‘ಜೇನುಕೃಷಿ ಮಾಡುವುದರಿಂದ ಪ್ರಕೃತಿಯ ಸಂರಕ್ಷಣೆಯಾಗುತ್ತದೆ. ಜೊತೆಗೆ ಅಧಿಕ ಇಳುವರಿ ಪಡೆಯಲು ಅವಕಾಶವಿದೆ’ ಎಂದರು.

ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದ ಸಹಾಯಕ ನಿರ್ದೇಶಕ ಡಾ.ಟಿ.ಎಸ್.ಮೋಸಸ್ ಮಾತನಾಡಿ, ‘ದಕ್ಷಿಣ ಭಾರತದಲ್ಲಿ ಜೇನುಕೃಷಿ ಮಾಡಲು ವಿಪುಲ ಅವಕಾಶಗಳಿವೆ. ಬಯಲುಸೀಮೆ, ಕರಾವಳಿ, ಸಹ್ಯಾದ್ರಿಯ ತಪ್ಪಲಿನಲ್ಲಿ ಜೇನುಗಳಿಗೆ ಅಗತ್ಯವಿರುವ ಮಕರಂದ, ಸಸ್ಯಸಂಪತ್ತು ಮತ್ತು ವೈವಿದ್ಯಮಯ ಬೆಳೆಗಳನ್ನು ಒಳಗೊಂಡಂತೆ ಪೂರಕ ವಾತಾವರಣವಿದೆ. ಕರ್ನಾಟಕ ಜೇನುಕೃಷಿ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿದ್ದು, ಸಾಕಷ್ಟು ರಫ್ತುಮಾಡಲಾಗುತ್ತಿದೆ’ ಎಂದು ಅವರು ತಿಳಿಸಿದರು.

ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕಿ ಡಾ.ಕೆ.ಹೇಮಲತಾ, ವಿವಿ ಡೀನ್‌ ಡಾ.ಬೈರೇಗೌಡ, ವಿಸ್ತರಣಾ ನಿರ್ದೇಶಕ ಡಾ.ಎಂ.ಎಸ್.ನಟರಾಜು, ಸಂಶೋಧನಾ ನಿರ್ದೇಶಕ ಡಾ.ಆರ್.ಸಿ.ಗೌಡ, ಜೇನುಕೃಷಿ ವಿಭಾಗದ ಮುಖ್ಯಸ್ಥ ಡಾ.ಕೆ.ಸಿ.ಕುಬೇರಪ್ಪ, ಅಖಿಲಭಾರತ ಸುಸಂಘಟಿತ ಜೇನುನೊಣ ಮತ್ತು ಪರಾಗಸ್ಪರ್ಶ ಸಂಶೋಧನಾ ಪ್ರಾಯೋಜನೆಯ ಮುಖ್ಯಸ್ಥ ಡಾ.ಕೆ.ಟಿ.ವಿಜಯಕುಮಾರ್ ಸಮಾರಂಭದಲ್ಲಿ ಹಾಜರಿದ್ದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.