ಬೆಂಗಳೂರು: ಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರನ್ನು ಮಧುಬಲೆಗೆ ಕೆಡವಲು ಪ್ರಯತ್ನಿಸಿದ ಪ್ರಕರಣದ ಕುರಿತು ಪ್ರಾಥಮಿಕ ವಿಚಾರಣೆ ನಡೆಸಿ ವರದಿ ಸಲ್ಲಿಸುವಂತೆ ಸಿಐಡಿಗೆ ಸೂಚಿಸಲಾಗಿದೆ.
ರಾಜ್ಯ ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್ ಅವರಿಂದ ಸೂಚನೆ ಬಂದ ಬೆನ್ನಲ್ಲೇ ಸಿಐಡಿ ಪೊಲೀಸರು ಪ್ರಕರಣದ ವಿಚಾರಣೆ ಆರಂಭಿಸಿದ್ದಾರೆ. ಸಿಐಡಿಯ ಐಜಿಪಿ ವಂಶಿಕೃಷ್ಣ ಅವರ ನೇತೃತ್ವದಲ್ಲಿ ತಂಡ ರಚಿಸಲಾಗಿದೆ. ಈ ತಂಡವು ಗುರುವಾರ ಪ್ರಾಥಮಿಕ ಮಾಹಿತಿ ಕಲೆ ಹಾಕಿದೆ ಎಂದು ಮೂಲಗಳು ತಿಳಿಸಿವೆ.
ತಮ್ಮನ್ನು ಮಧುಬಲೆಗೆ ಕೆಡವಲು ಯತ್ನಿಸಿದ ಪ್ರಕರಣದ ಕುರಿತು ಉನ್ನತ ಮಟ್ಟದ ತನಿಖೆ ನಡೆಸುವಂತೆ ಕೋರಿ ರಾಜಣ್ಣ ಅವರು ಗೃಹ ಸಚಿವ ಜಿ.ಪರಮೇಶ್ವರ ಅವರಿಗೆ ಮೂರು ಪುಟಗಳ ಪತ್ರವನ್ನು ಮಂಗಳವಾರ ಸಲ್ಲಿಸಿದ್ದರು. ಆ ಪತ್ರವನ್ನು ಗೃಹ ಸಚಿವರು, ಡಿಜಿಪಿ ಅಲೋಕ್ ಮೋಹನ್ ಅವರಿಗೆ ರವಾನಿಸಿ ತನಿಖೆಗೆ ಸೂಚನೆ ನೀಡಿದ್ದರು. ಪ್ರಕರಣದ ವಿಚಾರಣೆ ನಡೆಸುವಂತೆ ಅಲೋಕ್ ಮೋಹನ್ ಅವರು ಸಿಐಡಿಯ ಡಿಜಿಪಿ ಎಂ.ಎ.ಸಲೀಂ ಅವರಿಗೆ ಸೂಚಿಸಿದ ಬೆನ್ನಲ್ಲೇ ತನಿಖಾಧಿಕಾರಿಗಳು, ಎರಡು ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ ಎಂದು ಗೊತ್ತಾಗಿದೆ.
‘ಪ್ರಾಥಮಿಕವಾಗಿ ವಿಚಾರಣೆ ನಡೆಸಿ ವರದಿ ಸಲ್ಲಿಸುವಂತೆ ಡಿಜಿಪಿಯವರು ಸೂಚನೆ ನೀಡಿದ್ದಾರೆ. ರಾಜಣ್ಣ ಅವರ ಸರ್ಕಾರಿ ನಿವಾಸ ಜಯಮಹಲ್‌ನ ಬಂಗಲೆಗೆ ಭೇಟಿ ನೀಡಿ ಅಲ್ಲಿದ್ದವರಿಗೆ ಕೆಲವು ಪ್ರಶ್ನೆ ಕೇಳಿ, ಹೇಳಿಕೆ ದಾಖಲಿಸಿಕೊಳ್ಳಲಾಗಿದೆ. ಬಂಗಲೆಯಲ್ಲಿ ಯಾರೆಲ್ಲಾ ಇದ್ದಾರೆ ಎಂಬುದರ ಕುರಿತೂ ಮಾಹಿತಿ ಪಡೆಯಲಾಗಿದೆ. ಸಚಿವರು ಹೇಳಿದಂತೆ ಯಾರಾದರೂ ಮನೆಗೆ ಬಂದಿದ್ದರೆ ಎಂದೂ ಪರಿಶೀಲಿಸಲಾಗಿದೆ. ಘಟನೆ ನಡೆದ ದಿವಸ ಸಿಸಿಟಿವಿ ಕ್ಯಾಮೆರಾಗಳು ಇದ್ದವೇ ಎಂಬುದನ್ನೂ ಪರಿಶೀಲನೆ ನಡೆಸಲಾಯಿತು. ತುಮಕೂರಿನ ಕೆಲವು ಸ್ಥಳಗಳಿಗೆ ಭೇಟಿ ನೀಡಿ ಮಾಹಿತಿ ಕಲೆ ಹಾಕಲಾಗಿದೆ’ ಎಂದು ಸಿಐಡಿ ಮೂಲಗಳು ತಿಳಿಸಿವೆ.
ಅಧಿಕೃತ ಆದೇಶ ಇಲ್ಲ:
‘ಹನಿಟ್ರ್ಯಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ರಾಜ್ಯ ಸರ್ಕಾರದಿಂದ ಸಿಐಡಿಗೆ ಅಧಿಕೃತ ಆದೇಶ ಬಂದಿಲ್ಲ. 14 ದಿನಗಳ ಒಳಗೆ ಪ್ರಾಥಮಿಕ ವಿಚಾರಣೆ ನಡೆಸಿ, ವರದಿ ಸಲ್ಲಿಸುವಂತೆ ಸೂಚನೆ ಬಂದಿದೆ. ಸಚಿವರು ಸಲ್ಲಿಸಿದ ದೂರಿನ ಪ್ರತಿ ಆಧರಿಸಿ, ಕೆಲವರನ್ನು ವಿಚಾರಣೆಗೆ ಒಳಪಡಿಸಲಾಗುವುದು’ ಎಂದು ಮೂಲಗಳು ಹೇಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.