ADVERTISEMENT

ಕೆಲಸದಾಸೆಯಿಂದ ಮೋಸಹೋದ ಎಂಜಿನಿಯರ್, ಆಮಿಷವೊಡ್ಡಿ ₹11.32 ಲಕ್ಷ ವಂಚನೆ

ಅಮೆರಿಕದಲ್ಲಿ ಉದ್ಯೋಗ ಕೊಡಿಸುವುದಾಗಿ ಆಮಿಷ, ಸೈಬರ್‌ ಕ್ರೈಂ ಪೊಲೀಸರಿಗೆ ದೂರು

ಸಂತೋಷ ಜಿಗಳಿಕೊಪ್ಪ
Published 24 ಡಿಸೆಂಬರ್ 2018, 19:47 IST
Last Updated 24 ಡಿಸೆಂಬರ್ 2018, 19:47 IST
.
.   

ಬೆಂಗಳೂರು: ‘ಅಮೆರಿಕದ ಕಂಪನಿಯಲ್ಲಿ ಕೆಲಸ ಕೊಡಿಸುತ್ತೇನೆ’ ಎಂದು ಅಪರಿಚಿತನೊಬ್ಬ ಮೊಬೈಲ್‌ಗೆ ಕರೆ ಮಾಡಿ ಹೇಳಿದ್ದನ್ನು ನಂಬಿದ್ದ ನಗರದ ಎಂಜಿನಿಯರ್‌ ಒಬ್ಬರು, ಆತನ ಬ್ಯಾಂಕ್ ಖಾತೆಗೆ ₹11.32 ಲಕ್ಷ ಜಮೆ ಮಾಡಿ ಮೋಸ ಹೋಗಿದ್ದಾರೆ.

ದೊಡ್ಡನೆಕ್ಕುಂದಿಯ ಅಪಾರ್ಟ್‌ಮೆಂಟ್‌ ಸಮುಚ್ಚಯದಲ್ಲಿ ವಾಸವಿರುವಸಾಯಿಪ್ರಸಾದ್ ಚೌಧರಿ ಎಂಬುವರು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರನ್ನು ಸಂಪರ್ಕಿಸಿದ್ದ ಅಪರಿಚಿತ, ‘ಅಮೆರಿಕದ ಬಹುರಾಷ್ಟ್ರೀಯ ಕಂಪನಿ ‘ಹನಿವೆಲ್’ನಲ್ಲಿ ಉದ್ಯೋಗ ಕೊಡಿಸುತ್ತೇನೆ’ ಎಂದು ಹೇಳಿ ನಂಬಿಸಿ ಹಣ ಪಡೆದು ವಂಚಿಸಿದ್ದಾನೆ.

ಹಣ ಕಳೆದುಕೊಂಡಿರುವ ಸಾಯಿಪ್ರಸಾದ್‌, ಸೈಬರ್ ಕ್ರೈಂ ಠಾಣೆಗೆ ದೂರು ನೀಡಿದ್ದಾರೆ. ಮೊಬೈಲ್ ಹಾಗೂ ಬ್ಯಾಂಕ್ ಖಾತೆ ನಂಬರ್ ಆಧರಿಸಿ ತನಿಖೆ ಕೈಗೊಂಡಿರುವ ಪೊಲೀಸರು, ‘ಹಿತೇಶ್ ವರ್ಮಾ ಎಂಬಾತ ಈ ಕೃತ್ಯ ಎಸಗಿರುವ ಅನುಮಾನವಿದೆ. ಜೊತೆಗೆ ಆ ಹೆಸರಿನಲ್ಲಿ ಸಿಮ್ ಖರೀದಿಸಿರುವವರೂ ಈ ಕೃತ್ಯ ಎಸಗಿರುವ ಸಾಧ್ಯತೆ ಇದೆ’ ಎಂದರು.

ADVERTISEMENT

‘ನೌಕರಿ ಡಾಟ್ ಕಾಮ್‌’ನಲ್ಲಿ ರೆಸ್ಯುಮೆ: ‘ಹೊರ ದೇಶಗಳ ಕಂಪನಿಯಲ್ಲಿ ಕೆಲಸ ಮಾಡುವ ಆಸೆ ಇಟ್ಟುಕೊಂಡಿದ್ದ ಸಾಯಿಪ್ರಸಾದ್, ಅಂಥ ಕಂಪನಿಯಲ್ಲಿ ಖಾಲಿ ಇರುವ ಉದ್ಯೋಗಕ್ಕಾಗಿ ಹುಡುಕಾಟ ನಡೆಸುತ್ತಿದ್ದರು. ತಮ್ಮ ವೈಯಕ್ತಿಕ ಹಾಗೂ ಶೈಕ್ಷಣಿಕ ವಿವರ ಒಳಗೊಂಡ ರೆಸ್ಯುಮೆಯನ್ನು ‘ನೌಕರಿ ಡಾಟ್ ಕಾಮ್‌’ ಜಾಲತಾಣದಲ್ಲಿ ಅಪ್‌ಲೋಡ್‌ ಮಾಡಿದ್ದರು. ಕಂಪನಿಯವರು ಕರೆ ಮಾಡಿ ಆಫರ್‌ ನೀಡಬಹುದು ಎಂಬ ನಿರೀಕ್ಷೆ ಇಟ್ಟುಕೊಂಡಿದ್ದರು’ ಎಂದು ಸೈಬರ್ ಕ್ರೈಂ ಪೊಲೀಸರು ಹೇಳಿದರು.

‘ಫೆಬ್ರುವರಿ 2ರಂದು ಸಾಯಿಪ್ರಸಾದ್‌ಗೆ ಕರೆ ಮಾಡಿದ್ದ ಅಪರಿಚಿತ, ‘ಅಮೆರಿಕದ ಹನಿವೆಲ್ ಕಂಪನಿಯಿಂದ ಮಾತನಾಡುತ್ತಿದ್ದೇನೆ. ನಿಮ್ಮ ರೆಸ್ಯುಮೆ ನೋಡಿದ್ದೇನೆ. ನಮ್ಮ ಕಂಪನಿಯಲ್ಲಿ ಕೆಲಸ ಮಾಡುವ ಆಸಕ್ತಿ ಇದ್ದರೆ ತಿಳಿಸಿ. ನಿಮಗೆ ಕೆಲಸ ನೀಡಲು ನಾವು ಆಸಕ್ತರಾಗಿದ್ದೇವೆ’ ಎಂದು ಹೇಳಿದ್ದ. ಆರಂಭದಲ್ಲಿ ಅಪರಿಚಿತನ ಮಾತನ್ನು ಸಾಯಿಪ್ರಸಾದ್ ನಂಬಿರಲಿಲ್ಲ. ಕೆಲವು ದಿನಗಳ ನಂತರ ಬೇರೊಂದು ಮೊಬೈಲ್‌ ನಂಬರ್‌ನಿಂದ ಪುನಃ ಕರೆ ಮಾಡಿದ್ದ ಆರೋಪಿ, ಎರಡನೇ ಬಾರಿ ಕೆಲಸದ ಆಫರ್‌ ಮುಂದಿಟ್ಟಿದ್ದ’ ಎಂದು ಪೊಲೀಸರು ಹೇಳಿದರು.

‘ಅಪರಿಚಿತನ ಮಾತು ನಂಬಿದ್ದ ಸಾಯಿಪ್ರಸಾದ್, ಆತ ಕೇಳಿದ್ದ ಮಾಹಿತಿಯನ್ನೆಲ್ಲ ಹಂಚಿಕೊಂಡಿದ್ದರು. ‘ಕೆಲಸಕ್ಕೆ ಸಂದರ್ಶನ ನಡೆಸಬೇಕು. ಅದಕ್ಕಾಗಿ ಕೆಲವು ಶುಲ್ಕಗಳನ್ನು ಪಾವತಿ ಮಾಡಬೇಕು’ ಎಂದು ಆರೋಪಿ ತಿಳಿಸಿದ್ದ. ಅದಕ್ಕೆ ಒಪ್ಪಿದ್ದ ದೂರುದಾರ, ಆರೋಪಿ ನೀಡಿದ್ದ ಇಂಡಿಯನ್ ಓವರ್‌ಸೀಸ್ ಬ್ಯಾಂಕ್‌ ಶಾಖೆಯ ಖಾತೆಗೆ ಸೆ. 14ರಂದು ಹಣ ಜಮಾ ಮಾಡಿದ್ದರು. ಅದಾದ ಕೆಲವು ದಿನಗಳ ನಂತರ ಆರೋಪಿ, ಮೊಬೈಲ್ ಸ್ವಿಚ್ ಆಫ್‌ ಮಾಡಿದ್ದಾನೆ. ಎಷ್ಟೇ ಪ್ರಯತ್ನಿಸಿದರೂ ಆರೋಪಿಯು ಸಂಪರ್ಕಕ್ಕೆ ಸಿಗದಿದ್ದಾಗಲೇ ಅವರಿಗೆ ತಾವು ವಂಚನೆಗೆ ಒಳಗಾಗಿದ್ದು ಗೊತ್ತಾಗಿದೆ’ ಎಂದು ಪೊಲೀಸರು ಮಾಹಿತಿ ನೀಡಿದರು.

70 ದೇಶಗಳಲ್ಲಿ ಕಾರ್ಯ ನಿರ್ವಹಣೆ: ‘ದೂರು ದಾಖಲಾಗುತ್ತಿದ್ದಂತೆ ಹನಿವೆಲ್‌ ಕಂಪನಿಯ ಬಗ್ಗೆ ಮಾಹಿತಿ ಕಲೆಹಾಕಲಾಯಿತು. 130 ವರ್ಷದ ಕಂಪನಿಯು 70 ದೇಶಗಳಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಿದೆ. ತನ್ನ ಜಾಲತಾಣದ ಮೂಲಕವಷ್ಟೇ ನೇಮಕಾತಿ ಪ್ರಕ್ರಿಯೆ ನಡೆಸುತ್ತಿದ್ದು, ಯಾವುದೇ ಶುಲ್ಕವನ್ನು ಪಡೆಯುವುದಿಲ್ಲ. ಆ ಕಂಪನಿಯ ಹೆಸರಿನಲ್ಲಿ ಅಪರಿಚಿತರು ಸಾಯಿಪ್ರಸಾದ್‌ ಅವರಿಗೆ ವಂಚಿಸಿದ್ದಾರೆ’ ಎಂದು ಪೊಲೀಸರು ವಿವರಿಸಿದರು.

‘ಏರೋಸ್ಪೇಸ್, ಕಟ್ಟಡ ನಿರ್ಮಾಣ, ಕೈಗಾರಿಕೋದ್ಯಮ, ತೈಲ ಹಾಗೂ ಅನಿಲ, ಸುರಕ್ಷತಾ ಕ್ಷೇತ್ರದಲ್ಲಿ ‘ಹನಿವೆಲ್’ ಕಂಪನಿ ಕೆಲಸ ಮಾಡುತ್ತಿದೆ. 1.31 ಲಕ್ಷ ಉದ್ಯೋಗಿಗಳು ಇದ್ದಾರೆ. ಅವರಲ್ಲಿ ₹22 ಸಾವಿರ ಎಂಜಿನಿಯರ್‌ಗಳು ಹಾಗೂ ₹11 ಸಾಫ್ಟ್‌ವೇರ್‌ ಡೆವಲಪರ್‌ಗಳು ಇದ್ದಾರೆ. ವಂಚನೆ ಸಂಬಂಧ ದಾಖಲಾದ ಪ್ರಕರಣದ ಬಗ್ಗೆ ಕಂಪನಿಗೆ ಇ–ಮೇಲ್‌ ಮೂಲಕ ಮಾಹಿತಿ ನೀಡಲಾಗಿದೆ’ ಎಂದರು.

‘ಹನಿವೆಲ್ ಕಂಪನಿ ಹೆಸರಿನಲ್ಲಿ ವಂಚನೆಯಾಗಿರುವುದರಿಂದ, ಅವರ ಹೇಳಿಕೆಯೂ ಅಗತ್ಯವಾಗಿದೆ. ಕಂಪನಿಯಿಂದ ಇದುವರೆಗೂ ಯಾವುದೇ ಉತ್ತರ ಬಂದಿಲ್ಲ’ ಎಂದು ಪೊಲೀಸರು ತಿಳಿಸಿದರು.

* ‘ಹನಿವೆಲ್’ ಕಂಪನಿ ಹೆಸರು ದುರ್ಬಳಕೆ ಮಾಡಿಕೊಂಡು ವಂಚನೆ

* ಕಂಪನಿಗೆ ಇ–ಮೇಲ್ ಪ್ರಕರಣದ ಮಾಹಿತಿ ನೀಡಿರುವ ಪೊಲೀಸರು

* ಕೆಲಸ ಕೊಡಿಸುವುದಾಗಿ ಹಣ ಪಡೆದು ವಂಚಿಸುವ ಪ್ರಕರಣಗಳು ನಗರದಲ್ಲಿ ಹೆಚ್ಚಾಗುತ್ತಿದ್ದು, ಅಪರಿಚಿತ ಕರೆಗಳ ಬಗ್ಗೆ ಸಾರ್ವಜನಿಕರು ಎಚ್ಚರಿಕೆ ವಹಿಸಬೇಕು

-ಸೈಬರ್ ಪೊಲೀಸರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.