ADVERTISEMENT

ಆತ್ರೆ, ದೊರೆಸ್ವಾಮಿ, ರುದ್ರೇಗೌಡರಿಗೆ ಗೌರವ ಫೆಲೋಶಿಪ್

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2024, 15:37 IST
Last Updated 11 ಸೆಪ್ಟೆಂಬರ್ 2024, 15:37 IST
ನಗರದಲ್ಲಿ ಡಿಆರ್‌ಡಿಒ ಮಾಜಿ ಮುಖ್ಯಸ್ಥ ವಿ.ಕೆ. ಆತ್ರೆ, ಪಿಇಎಸ್ ವಿಶ್ವವಿದ್ಯಾಲಯದ ಕುಲಾಧಿಪತಿ ಎಂ.ಆರ್. ದೊರೆಸ್ವಾಮಿ ಮತ್ತು ಕೈಗಾರಿಕೋದ್ಯಮಿ ಎಸ್. ರುದ್ರೇಗೌಡ ಅವರಿಗೆ ಗೌರವ ಫೆಲೋಶಿಪ್ ಪ್ರಶಸ್ತಿ ಪ್ರದಾನ ಮಾಡಲಾಯಿತು
ನಗರದಲ್ಲಿ ಡಿಆರ್‌ಡಿಒ ಮಾಜಿ ಮುಖ್ಯಸ್ಥ ವಿ.ಕೆ. ಆತ್ರೆ, ಪಿಇಎಸ್ ವಿಶ್ವವಿದ್ಯಾಲಯದ ಕುಲಾಧಿಪತಿ ಎಂ.ಆರ್. ದೊರೆಸ್ವಾಮಿ ಮತ್ತು ಕೈಗಾರಿಕೋದ್ಯಮಿ ಎಸ್. ರುದ್ರೇಗೌಡ ಅವರಿಗೆ ಗೌರವ ಫೆಲೋಶಿಪ್ ಪ್ರಶಸ್ತಿ ಪ್ರದಾನ ಮಾಡಲಾಯಿತು   

ಬೆಂಗಳೂರು: ‘ಭಾರತ ಜ್ಞಾನದ ವಿಶ್ವ ಗುರುವಾಗಲು ವಿಜ್ಞಾನ, ತಂತ್ರಜ್ಞಾನ ಕ್ಷೇತ್ರದಿಂದ ಮಾತ್ರ ಸಾಧ್ಯ. ವಿಜ್ಞಾನ, ತಂತ್ರಜ್ಞಾನ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಿದರೆ ‘ಸೂಪರ್ ಪವರ್’ ರಾಷ್ಟ್ರವಾಗುವುದರಲ್ಲಿ ಸಂಶಯವಿಲ್ಲ’ ಎಂದು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ (ಡಿಆರ್‌ಡಿಒ) ಮಾಜಿ ಮುಖ್ಯಸ್ಥ ವಿ.ಕೆ. ಆತ್ರೆ ತಿಳಿಸಿದರು.

ವಿಜ್ಞಾನ, ತಂತ್ರಜ್ಞಾನ, ಶಿಕ್ಷಣ ಕ್ಷೇತ್ರದಲ್ಲಿನ ಸಾಧನೆಗಾಗಿ ಕರ್ನಾಟಕ ಅಸೋಸಿಯೇಷನ್ ಫಾರ್ ದಿ ಅಡ್ವಾನ್ಸ್‌ಮೆಂಟ್ ಆಫ್ ಸೈನ್ಸ್ ಮತ್ತು ಬೆಂಗಳೂರು ವಿಶ್ವವಿದ್ಯಾಲಯ ವಿಜ್ಞಾನ ವೇದಿಕೆ ಸಹಯೋಗದಲ್ಲಿ ಗೌರವ ಫೆಲೋಶಿಪ್ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು. ಪಿಇಎಸ್ ವಿಶ್ವವಿದ್ಯಾಲಯದ ಕುಲಾಧಿಪತಿ ಎಂ.ಆರ್. ದೊರೆಸ್ವಾಮಿ ಮತ್ತು ಕೈಗಾರಿಕೋದ್ಯಮಿ ಎಸ್. ರುದ್ರೇಗೌಡ ಅವರಿಗೂ ಗೌರವ ಫೆಲೋಶಿಪ್ ಪ್ರದಾನ ಮಾಡಲಾಯಿತು.

ಸಾಧಾರಣ ವ್ಯಕ್ತಿಗಳು ಅಸಾಧಾರಣ ಕಾರ್ಯಗಳನ್ನು ಸಾಧಿಸಬಹುದು. ಸರ್‌ ಎಂ. ವಿಶ್ವೇಶರಯ್ಯ, ಐನ್‌ಸ್ಟಿನ್‌, ಸಿ.ವಿ. ರಾಮನ್‌ರಂಥ ಅಸಾಮಾನ್ಯ ವ್ಯಕ್ತಿಗಳಿಂದ ಮಾತ್ರ ಸದೃಢ ರಾಷ್ಟ್ರ‌ ನಿರ್ಮಾಣವಾಗುವುದಲ್ಲ. ಸಣ್ಣ‌ ಕಾಲೇಜೊಂದರ ಅತಿ ಸಾಮಾನ್ಯ ವಿದ್ಯಾರ್ಥಿ ತನ್ನ ಕರ್ತವ್ಯ, ಗುರಿಗಳನ್ನು ಅರಿತು ಕಾರ್ಯ ನಿರ್ವಹಿಸಿದರೆ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದರು.

ADVERTISEMENT

ಎಂ.ಆರ್. ದೊರೆಸ್ವಾಮಿ ಮಾತನಾಡಿ. ‘ಪಿಇಎಸ್ ಶಿಕ್ಷಣ ಸಂಸ್ಥೆಗಳಲ್ಲಿ ಗುಣಮಟ್ಟದ ಶಿಕ್ಷಣದ ಜೊತೆಗೆ ವಿದ್ಯಾರ್ಥಿಗಳಿಗೆ ಸೂಕ್ತ ಮಾರ್ಗದರ್ಶನ, ಕೌಶಲ ತರಬೇತಿ, ವಿದ್ಯಾರ್ಥಿ-ಶಿಕ್ಷಕರ ಸಂಬಂಧ ಸುಧಾರಣೆಗಳಿಗೆ ಆದ್ಯತೆ ನೀಡಿದ್ದೇವೆ. ಎಲ್ಲ ಶಿಕ್ಷಣ ಸಂಸ್ಥೆಗಳೂ ಈ ಪ್ರಯತ್ನ ಮಾಡಬೇಕು’ ಎಂದು ಸಲಹೆ ನೀಡಿದರು.

ಕುಲಪತಿ ಜಯಕರ ಎಸ್.ಎಂ., ಕೆಎಎಎಸ್‌ ಅಧ್ಯಕ್ಷ ಕೆ. ಸಿದ್ದಪ್ಪ, ಅಶೋಕ್ ಡಿ. ಹಂಜಗಿ, ಬಿ.ಸಿ. ಪ್ರಭಾಕರ್, ಎನ್.ನಾಗಯ್ಯ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.